ಬೆಂಗಳೂರಿನಲ್ಲಿ ರಾಷ್ಟ್ರೀಯ ವಾಟರ್‌ ಪೋಲೊ, ಡೈವಿಂಗ್ ಇಂದಿನಿಂದ ಬೆಂಗಳೂರು: ಮುಂಗಾರು ಮಳೆ ಕಾಲಿಟ್ಟಿರುವ ಉದ್ಯಾನನಗರಿಯಲ್ಲಿ ರಾಷ್ಟ್ರೀಯ ವಾಟರ್‌ ಪೋಲೊ ಮತ್ತು ಡೈವಿಂಗ್ ಚಾಂಪಿಯನ್‌ಷಿಪ್‌ ಆಯೋಜಿಸಲು ವೇದಿಕೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಈ ಎರಡೂ ಕ್ರೀಡೆಗಳನ್ನು ಪ್ರತ್ಯೇಕವಾಗಿ ನಡೆಸಲಾಗುತ್ತಿದೆ. 75 ವರ್ಷಗಳಿಂದ ಈಜು ಚಾಂಪಿಯನ್‌ಷಿಪ್‌ ಭಾಗವಾಗಿ ಈ ಎರಡೂ ಕ್ರೀಡೆಗಳು ಆಯೋಜನೆಗೊಳ್ಳುತ್ತಿದ್ದವು. ಬುಧವಾರದಿಂದ ಜೂನ್ 25ರವರೆಗೆ ಬಸವನಗುಡಿ ಈಜು ಕೇಂದ್ರದಲ್ಲಿ ವಾಟರ್‌ ಪೋಲೊ ನಡೆಯಲಿದೆ. 22 ರಿಂದ 24ರವರೆಗೆ ಜ್ಞಾನಭಾರತಿಯಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ಈಜುಗೊಳದಲ್ಲಿ ಡೈವಿಂಗ್ ಸ್ಪರ್ಧೆಗಳು ಆರಂಭಗೊಳ್ಳಲಿವೆ. ಐದು ದಿನಗಳ ಕಾಲ ನಡೆಯಲಿವೆ. ಬೇರೆ ಬೇರೆ ರಾಜ್ಯಗಳಿಂದ 54 ಡೈವಿಂಗ್ ಪಟುಗಳು ಕಣಕ್ಕಿಳಿಯಲಿದ್ದಾರೆ. ‘ಈಜು ಮತ್ತು ಜಲಕ್ರೀಡೆಗಳಲ್ಲಿ ಕರ್ನಾಟಕವು ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ಇದೇ ಮೊದಲ ಸಲ ಪ್ರತ್ಯೇಕವಾಗಿ ಡೈವಿಂಗ್ ಹಾಗೂ ವಾಟರ್ ಪೋಲೊ ನಡೆಸುವ ಮಹತ್ವದ ಕಾರ್ಯವೂ ರಾಜ್ಯಕ್ಕೆ ಲಿಭಿಸಿದೆ. ಪುರುಷರ ವಿಭಾಗದಲ್ಲಿ 12 ತಂಡಗಳು ಹಾಗೂ ಮಹಿಳೆಯರ ಒಂಬತ್ತು ತಂಡಗಳು ಸ್ಪರ್ಧಿಸಲಿವೆ‘ ಎಂದು ಕರ್ನಾಟಕ ಈಜು ಸಂಸ್ಥೆ (ಕೆಎಸ್‌ಎ) ಅಧ್ಯಕ್ಷ ಗೋಪಾಲ್ ಬಿ ಹೊಸೂರ್ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಈ ಹಿಂದೆ ಕೇವಲ ಎಂಟು ರಾಜ್ಯಗಳು (ಪ್ರತಿ ವಲಯದಿಂದ 2 ತಂಡಗಳು) ಮಾತ್ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿದ್ದವು. ಈಗ ಹೆಚ್ಚು ತಂಡಗಳು ಭಾಗವಹಿಸುತ್ತವೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರಪ್ರದೇಶ, ರೈಲ್ವೆಸ್, ಸರ್ವಿಸಸ್‌ ಮತ್ತು ಪೊಲೀಸ್ ತಂಡಗಳಿವೆ. ಅಸ್ಸಾಂ, ದೆಹಲಿ, ಗುಜರಾತ್, ಹರಿಯಾಣ, ಮಣಿಪುರ, ಪಂಜಾಬ್, ತಮಿಳುನಾಡು ಮತ್ತು ತೆಲಂಗಾಣದಿಂದಲೂ ಸ್ಪರ್ಧಿಗಳು ಕಣದಲ್ಲಿದ್ದಾರೆ‘ ಎಂದು ಹೇಳಿದರು. ‘ಈಜು ಸ್ಪರ್ಧೆಗಳೊಂದಿಗೆ ಈ ಎರಡೂ ಕ್ರೀಡೆಗಳು ನಡೆದಾಗ ಹೆಚ್ಚು ಗಮನ ಸೆಳೆಯುತ್ತಿದ್ದಿಲ್ಲ. ಆದರೆ ಆಕರ್ಷಕ ಮತ್ತು ಸಾಹಸಮಯವಾಗಿರುವ ಈ ಕ್ರೀಡೆಗಳಿಗೂ ಪ್ರಾಧಾನ್ಯತೆ ನೀಡಲು ಭಾರತ ಈಜು ಫೆಡರೇಷನ್ ಈ ಕ್ರಮ ಕೈಗೊಂಡಿದೆ. ಕರ್ನಾಟಕದಲ್ಲಿ ಹೆಚ್ಚು ಡೈವಿಂಗ್ ಸೌಲಭ್ಯಗಳಿರುವ ಈಜುಗೊಳಗಳು ಇಲ್ಲ. ಸದ್ಯ ಇರುವ ಸೌಲಭ್ಯಗಳಲ್ಲಿ ಆಯೋಜನೆಗೊಳ್ಳಲಿವೆ. ವಾಟರ್‌ ಪೋಲೊ ತಾಂತ್ರಿಕ ತಂಡಕ್ಕೆ ಮಯಂಕ್ ಪಟೇಲ್ ಹಾಗೂ ಡೈವಿಂಗ್ ತಾಂತ್ರಿಕ ತಂಡಕ್ಕೆ ಮಯೂರ್ ವ್ಯಾಸ್ ಅವರು ಮುಖ್ಯಸ್ಥರಾಗಿದ್ದಾರೆ. ಒಲಿಂಪಿಕ್ ಕೂಟ ಸೇರಿದಂತೆ ಫಿನಾ ಕೂಟಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗೆ ಇದೆ‘ ಎಂದೂ ತಿಳಿಸಿದರು. ಈ ಸಂದರ್ಭದಲ್ಲಿ ಕೆಎಸ್‌ಎ ಉಪಾಧ್ಯಕ್ಷ ರಕ್ಷಿತ್ ಎನ್ ಜಗದಾಳೆ, ಸಹಕಾರ್ಯದರ್ಶಿಗಳಾದ ರಮ್ಯಾ ಬಾಲಕೃಷ್ಣ, ಎಸ್. ಸುಂದರೇಶ್, ಟಿ.ಡಿ. ವಿಜಯ ರಾಘವನ್, ರಾಮಾನುಜನ್ ಹಾಜರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.