ಕುಸ್ತಿ ಫೆಡರೇಷನ್‌ ಚುನಾವಣೆ ಜು. 4: ನ್ಯಾ.ಮಹೇಶ್ ಮಿತ್ತಲ್‌ ಚುನಾವಣಾ ಅಧಿಕಾರಿ ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಹೇಶ್‌ ಮಿತ್ತಲ್‌ ಕುಮಾರ್‌ ಅವರನ್ನು ಭಾರತ ಒಲಿಂಪಿಕ್‌ ಸಂಸ್ಥೆಯು (ಐಒಎ), ಭಾರತ ಕುಸ್ತಿ ಫೆಡರೇಷನ್‌ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಜುಲೈ 4ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಬ್ರಿಜ್‌ ಭೂಷಣ್ ಸಿಂಗ್‌ ವಿರುದ್ಧ ಹೋರಾಟದಲ್ಲಿ ತೊಡಗಿದ್ದ ಕುಸ್ತಿಪಟುಗಳ ಜೊತೆ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರು ಜುಲೈ 7ರಂದು ಮಾತುಕತೆ ನಡೆಸಿದ್ದರು. ಈ ವೇಳೆ ಅವರು ನನೆಗುದಿಗೆ ಬಿದ್ದಿರುವ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಚುನಾವಣೆಯನ್ನು ಜೂನ್‌ 30ರೊಳಗೆ ನಡೆಸುವುದಾಗಿ ಹೇಳಿದ್ದರು. ಆದರೆ, ಡಬ್ಲುಎಫ್‌ಐ ವಿಶೇಷ ಮಹಾಸಭೆಯನ್ನು ಕರೆಯಲು 21 ದಿನಗಳ ಮೊದಲು ನೋಟಿಸ್‌ ನೀಡಬೇಕಾಗಿರುವ ಕಾರಣ ಈ ಗಡುವು ಪಾಲನೆ ಕಷ್ಟವಾಗಿತ್ತು. ವಾರ್ಷಿಕ ಮಹಾಸಭೆ ಅಥವಾ ವಿಶೇಷ ಮಹಾಸಭೆ ಕರೆದು ಚುನಾವಣೆ ನಡೆಸಬಹುದಾಗಿದೆ. ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್‌ ಸಿಂಗ್ ಅವರ ಕುಟುಂಬ ಸದಸ್ಯರಿಗೆ ಅಥವಾ ಬೆಂಬಲಿಗರಿಗೆ ಚುನಾವಣೆಗೆ ಸ್ಪರ್ಧಿಸಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಸಚಿವರು ಕುಸ್ತಿಪಟುಗಳಿಗೆ ಆಶ್ವಾಸನೆ ನೀಡಿದ್ದರು. ಬಳಿಕವಷ್ಟೇ ಜೂನ್‌ 15ರವರೆಗೆ ಹೋರಾಟ ಸ್ಥಗಿತಗೊಳಿಸಲು ಧರಣಿನಿರತ ಪೈಲ್ವಾನರು ನಿರ್ಧರಿಸಿದ್ದರು. ನ್ಯಾ.ಮಿತ್ತಲ್‌ ಕುಮಾರ್‌ ಅವರಿಗೆ ನೇಮಕದ ವಿಷಯವನ್ನು ಐಒಎ ಸಿಇಒ ಆಗಿರುವ ಕಲ್ಯಾಣ್ ಚೌಬೆ ಅವರು ಪತ್ರಮುಖೇನ ತಿಳಿಸಿದ್ದು, ಹುದ್ದೆ ವಹಿಸಲು ಸಮ್ಮತಿಸುವಂತೆ ಮನವಿ ಮಾಡಿದ್ದಾರೆ. ಆದರೆ ನ್ಯಾ.ಮಿತ್ತಲ್ ಕುಮಾರ್ ಅವರು ವಿಶೇಷ ಮಹಾಸಭೆಯ ದಿನಾಂಕದ ಬಗ್ಗೆ ತಮ್ಮದೇ ನಿರ್ಧಾರ ಕೈಗೊಳ್ಳಬಹುದು. ಜುಲೈ 4ರಂದೇ ಚುನಾವಣೆ ನಡೆಸಬೇಕೇ ಅಥವಾ ಕೆಲದಿನಗಳ ನಂತರ ನಡೆಸಬೇಕೇ ಎಂಬುದು ಅವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಮೂಲಗಳು ತಿಳಿಸಿವೆ. ಕುಸ್ತಿ ಫಡರೇಷನ್‌ಗೆ ಕೇಂದ್ರಾಡಳಿತ ಪ್ರದೇಶ ಚಂಡೀಗಢ ಮತ್ತು ದೆಹಲಿ ಸೇರಿ 25 ಸಂಯೋಜಿತ ಘಟಕಗಳಿವೆ. ಪ್ರತಿ ಘಟಕಗಳು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಬಹುದು. ಪ್ರತಿಯೊಬ್ಬರೂ ಮತ ಚಲಾಯಿಸಲು ಅವಕಾಶವಿದೆ. ಚುನಾವಣೆಯಲ್ಲಿ 50 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಕುಸ್ತಿ ಫೆಡರೇಷನ್‌ ನಿಯಮಾವಳಿಯಂತೆ, ರಾಜ್ಯ ಘಟಕಗಳು ಕಾರ್ಯಕಾರಿ ಸಮಿತಿಯಲ್ಲಿರುವವರನ್ನು ಮಾತ್ರ ಪ್ರತಿನಿಧಿಗಳನ್ನಾಗಿ ನಾಮನಿರ್ದೇಶನ ಮಾಡಬೇಕಾಗುತ್ತದೆ. ಬ್ರಿಜ್‌ ಭೂಷಣ್ ಸಿಂಗ್‌ ಅವರ ಬೆಂಬಲಿಗರು ಅರ್ಹ ಅಭ್ಯರ್ಥಿಗಳಾಗಿದ್ದು ಚುನಾವಣೆಗೆ ನಾಮಪತ್ರ ಸಲ್ಲಿಸಿದರೆ ಏನಾಗಬಹುದು ಎಂಬ ಕುತೂಹಲವೂ ಇದೆ. ಸಿಂಗ್‌ ಅವರ ಪುತ್ರ ಕರಣ್ ಈ ಹಿಂದಿನ ಡಬ್ಲ್ಯುಎಫ್‌ಐ ಆಡಳಿತವರ್ಗದಲ್ಲಿ ಉಪಾಧ್ಯಕ್ಷ ಆಗಿದ್ದರು. ಅವರು ಉತ್ತರ ಪ್ರದೇಶ ಕುಸ್ತಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ. ಸಿಂಗ್ ಅವರ ಅಳಿಯ ವಿಶಾಲ್‌ ಸಿಂಗ್ ಅವರು ಬಿಹಾರ ಕುಸ್ತಿ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.