ಏಷ್ಯನ್‌ ಕಬಡ್ಡಿ: ಇರಾನ್‌ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದ ಭಾರತ ಬೂಸಾನ್‌ (ದಕ್ಷಿಣ ಕೊರಿಯಾ): ಪ್ರಮುಖ ದಾಳಿಗಾರ ಪವನ್‌ ಸಹರಾವತ್ ಅವರ ‘ಸೂಪರ್ ಟೆನ್‌’ ನೆರವಿನಿಂದ ಭಾರತ ತಂಡದವರು ಶುಕ್ರವಾರ ನಡೆದ ಫೈನಲ್‌ನಲ್ಲಿ ಇರಾನ್‌ ತಂಡವನ್ನು 42–32 ರಲ್ಲಿ 10 ಪಾಯಿಂಟ್‌ಗಳಿಂದ ಇರಾನ್‌ ತಂಡವನ್ನು ಸೋಲಿಸಿ 11ನೇ ಏಷ್ಯನ್ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡ ಭಾರತ ಎಂಟನೇ ಬಾರಿ ಚಾಂಪಿಯನ್‌ ಆಯಿತು. ಇರಾನ್‌ ತಂಡವೂ ಟೂರ್ನಿಯಲ್ಲಿ ಉತ್ತಮ ‍ಪ್ರದರ್ಶನ ನೀಡಿದರೂ, ಭಾರತದ ಎದುರು ಎರಡು ದಿನಗಳಲ್ಲಿ ಎರಡು ಬಾರಿ ಸೋಲನುಭವಿಸಿತು. ಭಾರತದ ಪರ ಪವನ್‌ 13 ಪಾಯಿಂಟ್ಸ್‌ ಗಳಿಸಿದರು. ಅಸ್ಲಾಂ ಇನಾಮದಾರ್ (8 ಪಾಯಿಂಟ್ಸ್) ಮತ್ತು ಅರ್ಜುನ್‌ ದೇಸ್ವಾಲ್‌ (5 ಪಾಯಿಂಟ್ಸ್‌) ಅವರೂ ಗೆಲುವಿನಲ್ಲಿ ಪಾತ್ರ ವಹಿಸಿದರು. ವಿರಾಮದ ವೇಳೆ ಭಾರತ 23–11 ಪಾಯಿಂಟ್‌ಗಳಿಂದ ಮುಂದಿತ್ತು. ಉತ್ತರಾರ್ಧದಲ್ಲಿ ಇರಾನ್‌ ನಾಯಕ ಮೊಹಮ್ಮದ್‌ರೇಝಾ ಶಾಡ್ಲುಯಿ ಚಿಯೆನಾ ಅವರು ಉತ್ತಮ ಪ್ರದರ್ಶನ ನೀಡಿದ್ದರಿಂದ ಭಾರತದ ಗೆಲುವಿನ ಅಂತರ ಸ್ವಲ್ಪ ಇಳಿಮುಖವಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.