ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಡಬಲ್ಸ್‌ನಲ್ಲಿ ಭಾರತಕ್ಕೆ ನಿರಾಸೆ ಆಡೆನ್ಸ್, ಡೆನ್ಮಾರ್ಕ್‌: ಯುವ ಆಟಗಾರ, ಭಾರತದ ಲಕ್ಷ್ಯ ಸೇನ್‌ ಡೆನ್ಮಾರ್ಕ್‌ ಓಪನ್‌ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು. ಆದರೆ ಅನುಭವಿ ಸೈನಾ ನೆಹ್ವಾಲ್‌ ಸವಾಲು ಅಂತ್ಯವಾಯಿತು. ಬುಧವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಹಣಾಹಣಿಯಲ್ಲಿ ಲಕ್ಷ್ಯ 21-9, 21-7ರಿಂದ ಭಾರತದವರೇ ಆದ ಸೌರಭ್ ವರ್ಮಾ ಸವಾಲು ಮೀರಿದರು. ಮುಂದಿನ ಪಂದ್ಯದಲ್ಲಿ ಅವರಿಗೆ ಒಲಿಂಪಿಕ್ ಚಾಂಪಿಯನ್‌, ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್ ಸವಾಲು ಎದುರಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಕೊನೆಗೊಂಡ ಡಚ್‌ ಓಪನ್ ಟೂರ್ನಿಯಲ್ಲಿ ಲಕ್ಷ್ಯ ರನ್ನರ್ ಅಪ್ ಆಗಿದ್ದರು. ಲಂಡನ್‌ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ, ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಭಾರತದ ಆಟಗಾರ್ತಿಯ ಎದುರು ಜಪಾನ್‌ನ ಆಯಾ ಒಹೊರಿ 21-16, 21-14ರಿಂದ ಜಯಿಸಿದರು. ಡಬಲ್ಸ್ ವಿಭಾಗಗಳಲ್ಲೂ ಭಾರತಕ್ಕೆ ನಿರಾಸೆ ಕಾದಿತ್ತು. ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಅಶ್ವಿನಿ ಪೊನ್ನಪ್ಪ ವೀರೋಚಿತ ಹೋರಾಟದಲ್ಲಿ 17-21, 21-14, 11-21ರಿಂದ ಚೀನಾದ ಫೆಂಗ್‌ ಯಾನ್ ಜೆ– ಡು ಯೆ ಎದುರು ಸೋತರು. ಮಹಿಳಾ ಡಬಲ್ಸ್‌ನಲ್ಲಿ ಮೇಘನಾ ಜಕ್ಕಂಪುಡಿ–ಪೂರ್ವಿಶಾ ಎಸ್‌. ರಾಮ್‌ 8-21, 7-21ರಿಂದ ಇಂಡೊನೇಷ್ಯಾದ ನೀತಾ ವಿಯೋಲಿನಾ ಮಾರ್ವಾ ಮತ್ತು ಪೂತ್ರಿ ಸಿಯಾಕಾ ಎದುರು ಮಣಿದರು. ಅಶ್ವಿನಿ–ಎನ್‌. ಸಿಕ್ಕಿ ರೆಡ್ಡಿ ಜೋಡಿಯೂ 17-21, 13-21ರಿಂದ ಕೊರಿಯಾದ ಲೀ ಸೋಹಿ– ಸಿನ್‌ ಸೆಂಗ್‌ಚಾನ್ ಎದುರು ಸೋಲು ಕಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.