ಎಂಟರಘಟ್ಟಕ್ಕೆ ಭಾರತ ತಂಡ ಆಹಸ್‌, ಡೆನ್ಮಾರ್ಕ್‌: ಭಾರತ ಪುರುಷರ ತಂಡವು ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. 2010ರ ಬಳಿಕ ತಂಡದಿಂದ ಈ ಸಾಧನೆ ಹೊರಹೊಮ್ಮಿದೆ. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡವು 5–0ಯಿಂದ ದುರ್ಬಲ ತಾಹಿತಿ ಎದುರು ಜಯಭೇರಿ ಮೊಳಗಿಸಿತು. ಮಂಗಳವಾರ ನೆದರ್ಲೆಂಡ್ಸ್ ತಂಡವನ್ನು ಇಷ್ಟೇ ಅಂತರದಿಂದ ಮಣಿಸಿತ್ತು. 2010ರಲ್ಲಿ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದ ಭಾರತ ತಂಡವು ಇಂಡೊನೇಷ್ಯಾ ಎದುರು ಮುಗ್ಗರಿಸಿತ್ತು. ತಾಹಿತಿ ಎದುರಿನ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಕಣಕ್ಕಿಳಿದಿದ್ದ ಬಿ.ಸಾಯಿ ಪ್ರಣೀತ್‌ 21-5, 21-6ರಿಂದ ಲೂಯಿಸ್‌ ಬೀಬೊಯಿಸ್‌ ಅವರನ್ನು ಮಣಿಸಿದರು. ಇನ್ನೊಂದು ಹಣಾಹಣಿಯಲ್ಲಿ ಸಮೀರ್‌ ವರ್ಮಾ 21-12, 21-12ರಿಂದ ರೆಮಿ ರೊಸ್ಸಿ ಎದುರು ಜಯಿಸಿದರು. ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನಲ್ಲಿ ಕಿರಣ್ ಜಾರ್ಜ್‌ 21-4, 21-2ರಿಂದ ಇಲಿಯಾಸ್‌ ಮೌಬ್ಲಾಂಕ್‌ ವಿರುದ್ಧ ಮೇಲುಗೈ ಸಾಧಿಸಿದರು. ಔಪಚಾರಿಕ ಎನಿಸಿದ್ದ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿಯು 21-5, 21-3ರಿಂದ ಮೌಬ್ಲಾಂಕ್‌ – ಹೈವಾ ಯೊನೆಟ್‌ ಎದುರು ಜಯ ಸಾಧಿಸಿದರು. ಇನ್ನೊಂದು ಸುತ್ತಿನಲ್ಲಿ ಕೃಷ್ಣಪ್ರಸಾದ್‌– ವಿಷ್ಣುವರ್ಧನ್‌ ಜೋಡಿಯೂ ಗೆಲುವಿನ ಹಾದಿ ತುಳಿಯಿತು. ತಾಹಿತಿ ಎದುರಿನ ಜಯದೊಂದಿಗೆ ಭಾರತ ‘ಸಿ‘ ಗುಂಪಿನಲ್ಲಿ ಅಗ್ರ ಎರಡು ತಂಡಗಳಲ್ಲಿ ಸ್ಥಾನ ಪಡೆಯುವುದನ್ನು ಖಚಿತಪಡಿಸಿಕೊಂಡಿದೆ. ಗುರುವಾರ ನಡೆಯುವ ಪಂದ್ಯದಲ್ಲಿ ತಂಡಕ್ಕೆ ಬಲಿಷ್ಠ ಚೀನಾ ಸವಾಲು ಎದುರಾಗಿದೆ. ಮಹಿಳಾ ತಂಡಕ್ಕೆ ಸೋಲು: ಊಬರ್‌ ಕಪ್‌ ಟೂರ್ನಿಯ‘ಬಿ‘ ಗುಂಪಿನ ಕೊನೆಯ ಪಂದ್ಯದಲ್ಲಿ ಥಾಯ್ಲೆಂಡ್ ಎದುರು ಕಣಕ್ಕಿಳಿದಿದ್ದ ಭಾರತ ಮಹಿಳಾ ತಂಡವು 0–5ರಿಂದ ನಿರಾಸೆ ಅನುಭವಿಸಿತು. ತಂಡಕ್ಕೆ ಇದು ಮೊದಲ ಸೋಲು. ಈ ಮೊದಲು ಸ್ಪೇನ್‌ (3–2) ಹಾಗೂ ಸ್ಕಾಟ್ಲೆಂಡ್‌ (4–1) ತಂಡಗಳನ್ನು ಮಣಿಸಿತ್ತು. ಥಾಯ್ಲೆಂಡ್‌ ಎದುರಿನ ಪಂದ್ಯದ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಮಾಳವಿಕಾ ಬಾನ್ಸೋದ್‌ 15-21, 11-21ರಿಂದ ಪಾರ್ನ್‌ಪ‍ವೀ ಚೋಚುವಾಂಗ್ ಎದುರು ಸೋತರು. ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ– ಎನ್.ಸಿಕ್ಕಿರೆಡ್ಡಿ 16-21, 12-21ರಿಂದ ಜಾಂಗ್‌ಕೊಲ್ಪನ್‌ ಕಿತಿತಾರ್ಕುಲ್– ರವಿಂದಾ ಪ್ರಜೊಂಗ್‌ಜಾಯ್‌ ಎದುರು ಎಡವಿದರು. ಗೆಲ್ಲಲೇಬೇಕಿದ್ದ ಸಿಂಗಲ್ಸ್ ಹಣಾಹಣಿಯಲ್ಲಿ ಅದಿತಿ ಭಟ್‌ ಅವರು ಜಿದ್ದಾಜಿದ್ದಿನ ಪೈಪೋಟಿಯಲ್ಲಿ 16-21, 21-18, 15-21ರಿಂದ ಬುಸಾನನ್ ಒಂಗ್‌ಬಮ್ರುಂಗ್‌ಪನ್ ಎದುರು ಸೋತರು. ಡಬಲ್ಸ್‌ನಲ್ಲಿ ತ್ರೀಶಾ ಜೋಲಿ– ಗಾಯತ್ರಿ ಗೋಪಿಚಂದ್‌ ಮತ್ತು ಇನ್ನೊಂದು ಸಿಂಗಲ್ಸ್‌ ಸೆಣಸಾಟದಲ್ಲಿ ತಸ್ನಿಮ್ ಮೀರ್ ಕೂಡ ನಿರಾಸೆ ಅನುಭವಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.