ಜಸ್‌, ಶರಣ್‌.. ಈಜುಕೊಳದ ‘ಚಿನ್ನ’ದ ಮೀನುಗಳು ಜಸ್‌ ಸಿಂಗ್‌, ಶರಣ್‌ ಶ್ರೀಧರ್‌... ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರೀಯ ಸಬ್‌ಜೂನಿಯರ್, ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಿನುಗಿದ ಚಿನ್ನದಂತಹ ಪ್ರತಿಭೆಗಳು. ಬಾಲಕರ ಸಬ್‌ಜೂನಿಯರ್‌ನಲ್ಲಿ ಶರಣ್‌ ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡು 10 ವರ್ಷದೊಳಗಿನವರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌ಷಿಪ್ ಪಟ್ಟ ಧರಿಸಿದರೆ, ಜಸ್‌ ಸಿಂಗ್‌ಗೆ ಆರು ಚಿನ್ನದ ಪದಕಗಳು ಒಲಿದವು. ಅಲ್ಲದೆ ಒಂಬತ್ತು ವರ್ಷದೊಳಗಿನವರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪಟ್ಟವೂ ಈ ಹುಡುಗನ ಪಾಲಾಯಿತು. ಬೆಂಗಳೂರಿನ ಮತ್ಸ್ಯ ಈಜು ಅಕಾಡೆಮಿಯಲ್ಲಿ ಮೂರು ವರ್ಷಗಳಿಂದ ತರಬೇತಿ ಪಡೆಯುತ್ತಿರುವ ಉದ್ಯಾನನಗರಿಯ ಈ ಹುಡುಗರು, ಮುಖ್ಯ ಕೋಚ್ ಆಗಿರುವ ಶ್ರೀಶ್‌ ರೆಡ್ಡಿ ಅವರ ತರಬೇತಿಯಲ್ಲಿ ಪಳಗುತ್ತಿದ್ದಾರೆ.ಈಜು ಕ್ರೀಡೆಯಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಶ್ರೀಶ್‌, ಏಕಲವ್ಯ ಪ್ರಶಸ್ತಿ ಪುರಸ್ಕೃತರೂ ಹೌದು. ಪಂಚ ನದಿಗಳ ನಾಡು ಪಂಜಾಬ್‌ನಿಂದ ಬಂದು ಸಿಲಿಕಾನ್‌ ಸಿಟಿಯಲ್ಲಿ ನೆಲೆಸಿರುವ ಜಸ್‌ ಪೋಷಕರು ಮಗನ ಸಾಧನೆಯ ಹಿಂದಿನಪ್ರಮುಖ ಶಕ್ತಿಯಾಗಿದ್ದಾರೆ. ಎಂಜಿನಿಯರ್‌ ವೃತ್ತಿಯಲ್ಲಿರುವ ತಂದೆ ಭೂಪಿಂದರ್‌ ಸಿಂಗ್‌ ಹಾಗೂ ತಾಯಿ ಪ್ರೀತ್‌ ಅವರಿಗೆ ನಗರದ ಐಟಿ ಕಂಪೆನಿಯೊಂದರಲ್ಲಿ ಕೆಲಸವಿದೆ. ‘2012ರಲ್ಲಿ ನಾವು ಈಜು ಕಲಿತು ಮಾಸ್ಟರ್ಸ್‌ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆವು. ಜಸ್‌ಗೆ ಆಗ ಎರಡು ವರ್ಷದ ಪ್ರಾಯ. ಇದೇ ವೇಳೆ ಲಂಡನ್‌ ಒಲಿಂಪಿಕ್ಸ್‌ ನಡೆಯುತ್ತಿತ್ತು. ಅಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ನಮಗೆ, ನಮ್ಮ ಮಗನಿಂದಲೂ ಆ ರೀತಿ ಸಾಧನೆ ಹೊರಹೊಮ್ಮಿಸಬೇಕೆಂಬ ಹಂಬಲ ಮೊಳಕೆಯೊಡೆಯಿತು. ಹಾಗಾಗಿ ಜಸ್‌ನನ್ನು ಈಜು ತರಬೇತಿಗೆ ಸೇರಿಸಿದೆವು‌’ ಎನ್ನುತ್ತಾರೆ ಭೂಪಿಂದರ್‌ ಸಿಂಗ್‌. ‘ತಂದೆ– ತಾಯಿಯಾಗಿ ನಾವು ನೀಡಬೇಕಾದ ಪ್ರೋತ್ಸಾಹ, ಎಲ್ಲ ಸೌಲಭ್ಯಗಳನ್ನು ಆತನಿಗೆ ಒದಗಿಸಿದ್ದೇವೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಜಸ್‌ನಿಂದ ಪದಕದ ನಿರೀಕ್ಷೆಯಿತ್ತು. ಆದರೆ ಈ ಮಟ್ಟದಲ್ಲಿ ಆತ ಸಾಧನೆ ಮಾಡುತ್ತಾನೆ ಅಂದುಕೊಂಡಿರಲಿಲ್ಲ. ಬಹುತೇಕ ಸ್ಪರ್ಧೆಗಳಲ್ಲಿ ಹೆಚ್ಚಿನ ಅಂತರದ ಗೆಲುವು ಅವನಿಗೆ ಒಲಿದಿದೆ; ಹೆಮ್ಮೆಯೆನಿಸುತ್ತಿದೆ’ ಎಂದರು ಭೂಪಿಂದರ್‌. ‘ಚಿನ್ನದ ಪದಕಗಳ ಸಾಧನೆಯಿಂದ ತುಂಬಾ ಖುಷಿಯಾಗಿದೆ. ಇನ್ನೂ ಕಠಿಣ ತರಬೇತಿ ಪಡೆದು ಎಲ್ಲ ವಿಭಾಗಗಳಲ್ಲೂ ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸುವ ಆಸೆಯಿದೆ’ ಎಂಬುದು ಜಸ್‌ ಮಾತು. ಶರಣ್‌ ತಂದೆಶ್ರೀಧರ್ ಕೂಡ ಸಾಫ್ಟ್‌ವೇರ್ ಎಂಜಿನಿಯರ್‌. ತಾಯಿ ಲಕ್ಷ್ಮೀ ಅವರು ವೈದ್ಯೆಯಾಗಿದ್ದಾರೆ. ‘ಸದ್ಯ ಆರನೇ ತರಗತಿಯಲ್ಲಿ ಓದುತ್ತಿರುವ ಶರಣ್‌ನ ದಿನಚರಿ (ಕೋವಿಡ್‌ ಲಾಕ್‌ಡೌನ್‌ಗಿಂತ ಮೊದಲು) ಬೆಳಿಗ್ಗೆ ಐದು ಗಂಟೆಯಿಂದಲೇ ಆರಂಭವಾಗುತ್ತಿತ್ತು. 5.45ರ ಹೊತ್ತಿಗೆ ಆತ ಈಜುಕೊಳಕ್ಕೆ ಅಭ್ಯಾಸಕ್ಕೆ ತೆರಳುತ್ತಿದ್ದ. ಬಳಿಕ ಶಾಲೆಗೆ ಹೋಗಿ ಬಂದ ನಂತರ ಒಂದು ತಾಸು ವಿಶ್ರಾಂತಿ ತೆಗೆದುಕೊಂಡು ಸಂಜೆ 4.30ಕ್ಕೆ ಮತ್ತೆ ತರಬೇತಿಗೆ ಮರಳುತ್ತಿದ್ದ. ಮೂರು ತಾಸು ಅಭ್ಯಾಸದ ಬಳಿಕ ಮನೆಗೆ ಬಂದು ಒಂದೆರಡು ತಾಸು ಶಾಲಾ ಪಠ್ಯದ ಓದು ನಿರ್ವಹಿಸುತ್ತಿದ್ದ’ ಎಂದು ಮಗ ಪಟ್ಟ ಪರಿಶ್ರಮದ ಬಗ್ಗೆ ಶ್ರೀಧರ್ ಹೆಮ್ಮೆಪಡುತ್ತಾರೆ. ‘ಲಾಕ್‌ಡೌನ್ ವೇಳೆಯಲ್ಲಿ ತುಂಬ ತೊಂದರೆಯಾಯಿತು. ಈಜುಕೊಳಗಳು ಮುಚ್ಚಿದ್ದರಿಂದ ಆನ್‌ಲೈನ್‌ ಮೂಲಕ ಕೋಚ್‌ ಹೇಳಿದ ತರಬೇತಿ ಪಾಠಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ. ಕೋವಿಡ್‌ ಇಲ್ಲದಿದ್ದರೆ ಶರಣ್‌ ಇನ್ನೂ ಉತ್ತಮ ಸಾಧನೆ ಮಾಡಬಹುದಿತ್ತು ಎನಿಸುತ್ತದೆ. ಆತ ಇನ್ನೂ ಕಲಿಯುವುದು ಬಹಳಷ್ಟಿದೆಯಾದರೂ ಆತ ತೋರುತ್ತಿರುವ ಸಾಮರ್ಥ್ಯದ ಬಗ್ಗೆ ತುಂಬ ಖುಷಿಯಂತೂ ಇದೆ’ ಎಂದು ಸಂತಸ ಹಂಚಿಕೊಂಡರು ಶ್ರೀಧರ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.