ಆ್ಯಂಟನ್ಸನ್‌ಗೆ ಆಘಾತ; ಎಂಟರಘಟ್ಟಕ್ಕೆ ಸಮೀರ್‌ ಒಡೆನ್ಸ್, ಡೆನ್ಮಾರ್ಕ್‌: ಭಾರತದ ಸಮೀರ್ ವರ್ಮಾ ಅವರು ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಆ್ಯಂಡರ್ಸ್‌ ಆ್ಯಂಟನ್ಸನ್‌ಗೆ ಆಘಾತ ನೀಡಿ, ಡೆನ್ಮಾರ್ಕ್‌ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಎಂಟರಘಟ್ಟಕ್ಕೆ ಲಗ್ಗೆಯಿಟ್ಟರು. ಆದರೆ ಲಕ್ಷ್ಯ ಸೇನ್‌ ನಿರಾಸೆ ಅನುಭವಿಸಿದರು. ವಿಶ್ವ ಕ್ರಮಾಂಕದಲ್ಲಿ 28ನೇ ಸ್ಥಾನದಲ್ಲಿರುವ ಸಮೀರ್, 2018ರಲ್ಲಿ ವಿಶ್ವ ಟೂರ್ ಫೈನಲ್ಸ್ ಪ್ರವೇಶಿಸಿದ್ದರು. ಇಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಅವರು 21-14, 21-18ರಿಂದ ಡೆನ್ಮಾರ್ಕ್‌ನ ಆ್ಯಂಟನ್ಸನ್‌ಗೆ ಸೋಲುಣಿಸಿದರು. 50 ನಿಮಿಷಗಳಲ್ಲಿ ಅವರಿಗೆ ಗೆಲುವು ಒಲಿಯಿತು. ಆ್ಯಂಟನ್ಸನ್ ವಿರುದ್ಧ ಆಡಿದ ಆರು ಪಂದ್ಯಗಳ ಪೈಕಿ ಸಮೀರ್ ಕೇವಲ ಒಂದರಲ್ಲಿ ಗೆಲುವು ಸಾಧಿಸಿದ್ದರು. ಆದರೆ ಈ ಪಂದ್ಯದಲ್ಲಿ ಭಾರತದ ಆಟಗಾರ ತೋರಿದ ತಾಂತ್ರಿಕತೆ, ಚಾಣಾಕ್ಷತನ ಕೈಹಿಡಿದವು. ಮೊದಲ ಗೇಮ್‌ನ ಆರಂಭದಲ್ಲಿ 2–0ಯಿಂದ ಮುನ್ನಡೆ ಗಳಿಸಿದ ಸಮೀರ್‌, ವಿರಾಮದ ವೇಳೆಗೆ ಅದನ್ನು 11–6ಕ್ಕೆ ಕೊಂಡೊಯ್ದರು. ತಿರುಗೇಟು ನೀಡಲು ಡೆನ್ಮಾರ್ಕ್‌ ಆಟಗಾರ ತೋರಿದ ಎಲ್ಲ ಪ್ರಯತ್ನಗಳನ್ನು ಸಮೀರ್ ವಿಫಲಗೊಳಿಸಿದರು. ಸತತ ಮೂರು ಪಾಯಿಂಟ್ಸ್ ಸಂಗ್ರಹಿಸಿ ಮೊದಲ ಗೇಮ್‌ ವಶಕ್ಕೆ ಪಡೆದರು. ಎರಡನೇ ಗೇಮ್ ಜಿದ್ದಾಜಿದ್ದಿಯಿಂದ ಕೂಡಿತ್ತು. ಆದರೆ 5–3ರ ಆರಂಭದ ಮುನ್ನಡೆ ಗಳಿಸಿದ್ದ ಸಮೀರ್‌, ಅದನ್ನು ಕಾಯ್ದುಕೊಂಡರು. 11–8ರ ಮುನ್ನಡಯೊಂದಿಗೆ ವಿರಾಮಕ್ಕೆ ತೆರಳಿದ ಭಾರತದ ಆಟಗಾರ, ಎದುರಾಳಿಗೆ ಪುಟಿದೇಳಲು ಅವಕಾಶ ನೀಡಲಿಲ್ಲ. ಮಧ್ಯಪ್ರದೇಶದ 27 ವರ್ಷದ ಸಮೀರ್‌ಗೆ ಮುಂದಿನ ಪಂದ್ಯದಲ್ಲಿ ಇಂಡೊನೇಷ್ಯಾದ ಟಾಮಿ ಸುಗಿಯಾರ್ತೊ ಸವಾಲು ಎದುರಾಗಿದೆ. 2014ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸುಗಿಯಾರ್ತೊ ಕಂಚಿನ ಪದಕ ಗೆದ್ದುಕೊಂಡಿದ್ದರು. ಭರವಸೆ ಮೂಡಿಸಿದ್ದ ಭಾರತದ ಇನ್ನೋರ್ವ ಆಟಗಾರ ಲಕ್ಷ್ಯ ಸೇನ್‌ ಎಡವಿದರು. ಎರಡನೇ ಸುತ್ತಿನ ಪಂದ್ಯದಲ್ಲಿ ಅವರ ವಿರುದ್ಧ ಕಣಕ್ಕಿಳಿದಿದ್ದ ಒಲಿಂಪಿಕ್ ಚಾಂಪಿಯನ್‌ ವಿಕ್ಟರ್ ಅಕ್ಸೆಲ್ಸೆನ್‌ 21-15 21-7ರಿಂದ ಜಯದ ನಗೆ ಬೀರಿದರು. ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಪಿ.ವಿ.ಸಿಂಧು ಕೂಡ ಗುರುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.