ಎಐಬಿಎ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಬೈ ಪಡೆದ ಸಂಜೀತ್‌, ಸಚಿನ್‌ ಬೆಲ್‌ಗ್ರೇಡ್‌: ಏಷ್ಯನ್ ಚಾಂಪಿಯನ್‌, ಭಾರತದ ಸಂಜೀತ್‌ ಹಾಗೂ ಸಚಿನ್ ಕುಮಾರ್ ಅವರಿಗೆ ಎಐಬಿಎ ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದೆ. ದಾಖಲೆ ಸಂಖ್ಯೆಯ ಸ್ಪರ್ಧಿಗಳು ಪಾಲ್ಗೊಂಡಿರುವ ಚಾಂಪಿಯನ್‌ಷಿಪ್‌ನ ಡ್ರಾವನ್ನು ಸೋಮವಾರ ಪ್ರಕಟಿಸಲಾಯಿತು. ಇದೇ 30ರಂದು ನಡೆಯುವ 80 ಕೆಜಿ ವಿಭಾಗದ ಎರಡನೇ ಸುತ್ತಿನ ಬೌಟ್‌ನಲ್ಲಿ ಸಚಿನ್ ಕುಮಾರ್ ಅವರು ಅಮೆರಿಕದ ರಾಬಿ ಗೊಂಜಾಲೆಜ್ ಅವರನ್ನು ಎದುರಿಸಲಿದ್ದಾರೆ. ಸಂಜೀತ್‌ (92 ಕೆಜಿ) ತಮ್ಮ ಮೊದಲ ಬೌಟ್‌ನಲ್ಲಿ 29ರಂದು ರಷ್ಯಾದ ಆ್ಯಂಡ್ರೆ ಸ್ಟಾಟ್‌ಸ್ಕಿ ಅವರಿಗೆ ಮುಖಾಮುಖಿಯಾಗುವರು. 100 ರಾಷ್ಟ್ರಗಳ 600ಕ್ಕೂ ಅಧಿಕ ಬಾಕ್ಸರ್‌ಗಳು ಸ್ಪರ್ಧೆಯಲ್ಲಿದ್ದು, ಕೆಲವೊಂದು ವಿಭಾಗಗಳ ಸ್ಪರ್ಧಿಗಳು ಕ್ವಾರ್ಟರ್‌ಫೈನಲ್‌ ಹಂತಕ್ಕೇರಲು ಕನಿಷ್ಠ ಮೂರು ಬೌಟ್‌ಗಳನ್ನು ಗೆಲ್ಲಬೇಕಿದೆ. ಐದು ಬಾರಿಯ ಏಷ್ಯನ್ ಪದಕ ಜಯಿಸಿರುವ ಶಿವ ಥಾಪಾ (63.5 ಕೆಜಿ) ಅವರಲ್ಲಿ ಒಬ್ಬರು. ಶಿವ ತಮ್ಮ ಮೊದಲ ಬೌಟ್‌ನಲ್ಲಿ ಮಂಗಳವಾರ ಕೀನ್ಯಾದ ವಿಕ್ಡರ್‌ ಒದಿಯಾಂಬೊ ನ್ಯಾದೆರಾ ಅವರನ್ನು ಎದುರಿಸುವರು. ಇದೇ ದಿನ ದೀಪಕ್‌ ಕುಮಾರ್‌ (51 ಕೆಜಿ) ಅವರು ಕಿರ್ಗಿಸ್ತಾನದ ಅಜತ್‌ ಉಸೆನಲಿಯೆವ್ ಅವರೊಂದಿಗೆ, ಗೋವಿಂದ್‌ ಸಹಾನಿ (48 ಕೆಜಿ) ಅವರು ಈಕ್ವೆಡಾರ್‌ನ ಬಿಲ್ಲಿ ಜೋವಾ ಒರ್ಟಿಜ್‌ ಎದುರು ಸೆಣಸುವರು. 29ರಂದು ಆಕಾಶ್ ಕುಮಾರ್‌ (54 ಕೆಜಿ) ಅವರು ಜರ್ಮನಿಯ ಒಮರ್ ಸಲಾಹ್‌ ವಿರುದ್ಧ ಕಣಕ್ಕಿಳಿಯುವರು. ಬುಧವಾರ ವೀರೇಂದ್ರ ಸಿಂಗ್‌ (60 ಕೆಜಿ), ಆರ್ಮೆನಿಯಾದ ಕರೆನ್‌ ತೋನಾಕನ್ಯನ್‌, ನಿಶಾತ್ ದೇವ್‌ (71 ಕೆಜಿ) ಅವರು ಹಂಗರಿಯ ಲಾಜ್ಲೊ ಕೊಜಕ್‌ ವಿರುದ್ಧ ಅದೃಷ್ಟ ಪರೀಕ್ಷಿಸಲಿದ್ದಾರೆ. ಭಾರತವನ್ನು ಪ್ರತಿನಿಧಿಸುತ್ತಿರುವ ಎಲ್ಲ ಬಾಕ್ಸರ್‌ಗಳು ಆಯಾ ತೂಕ ವಿಭಾಗಗಳಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.