ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಷಿಪ್‌: ಎರಡನೇ ಸುತ್ತಿಗೆ ಸುಮಿತ್, ನಿಶಾಂತ್‌ ಬೆಲ್‌ಗ್ರೇಡ್‌: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಕಣಕ್ಕಿಳಿದಿರುವ ಭಾರತದ ನಿಶಾಂತ್ ದೇವ್ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ದೇಶದ ಒಟ್ಟು ಏಳು ಮಂದಿ ಮೊದಲ ಸುತ್ತಿನ ತಡೆ ದಾಟಿದ್ದು, ಅಜೇಯ ಓಟ ಮುಂದುವರಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 71 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ನಿಶಾಂತ್‌ ಬುಧವಾರ ಮೊದಲ ಸುತ್ತಿನ ಬೌಟ್‌ನಲ್ಲಿ 5–0ಯಿಂದ ಲಾಸ್ಲೊ ಕೊಜಾಕ್ ಅವರಿಗೆ ಸೋಲಿನ ಪಂಚ್‌ ನೀಡಿದರು. ಮುಂದಿನ ಸುತ್ತಿನಲ್ಲಿ ಅವರಿಗೆ ಮಾರಿಷಿಯಸ್‌ನ ಮೆರ್ಯೆನ್‌ ಕ್ಲೇರ್‌ ಸವಾಲು ಎದುರಾಗಿದೆ. ಸುಮಿತ್‌ (75 ಕೆಜಿ), ನರೇಂದ್ರ ಬೆರ್ವಾಲ್‌ (+92 ಕೆಜಿ) ಕೂಡ ಮಂಗಳವಾರ ರಾತ್ರಿ ನಡದ ಬೌಟ್‌ಗಳಲ್ಲಿ ವಿಜಯ ಸಾಧಿಸಿ ಮುನ್ನಡೆದರು. ಸುಮಿತ್‌ 5-0ಯಿಂದ ಜಮೈಕಾದ ಡ್ಯಾಮನ್‌ ಓ ನಿಲ್‌ ಎದುರು ಗೆದ್ದರೆ, ನರೇಂದರ್‌ 4–1ರಿಂದ ಪೋಲೆಂಡ್‌ನ ಆಸ್ಕರ್‌ ಸಫರಿಯಾನ್ ಸವಾಲು ಮೀರಿದರು. ಸುಮಿತ್ ಅವರು ಮುಂದಿನ ಸುತ್ತಿನಲ್ಲಿ ತಜಿಕಿಸ್ತಾನದ ಅಬ್ದುಲ್‌ಮಲಿಕ್‌ ಬೊಲ್ಟಯೆವ್ ಎದುರು, ನರೇಂದರ್‌ ಅವರು ಸಿಯಾರಾ ಲಿಯೋನ್‌ನ ಮೊಹಮ್ಮದ್ ಕೆಂಡೆಹ್ ಎದುರು ಸ್ಪರ್ಧಿಸಲಿದ್ದಾರೆ. ಏಷ್ಯನ್ ಪದಕ ವಿಜೇತರಾದ ಶಿವ ಥಾಪಾ (63.5 ಕೆಜಿ) ಹಾಗೂ ದೀಪಕ್ ಬೋರಿಯಾ (51 ಕೆಜಿ) ಸೇರಿದಂತೆ ಭಾರತದ ನಾಲ್ಕು ಮಂದಿ ಬಾಕ್ಸರ್‌ಗಳು ಈಗಾಗಲೇ ಎರಡನೇ ಸುತ್ತು ತಲುಪಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.