ಕಾಂಪೌಂಡ್‌: ಕ್ಲೀನ್‌ಸ್ವೀಪ್‌ ಸಾಧನೆಯತ್ತ ಭಾರತ ತಾಷ್ಕೆಂಟ್‌, ಉಜ್ಬೆಕಿಸ್ತಾನ : ಏಷ್ಯಾಕಪ್ ಎರಡನೇ ಲೆಗ್ ವಿಶ್ವ ರ‍್ಯಾಂಕಿಂಗ್‌ ಆರ್ಚರಿ ಟೂರ್ನಿಯ ಕಾಂಪೌಂಡ್ ವಿಭಾಗದಲ್ಲಿ ಭಾರತದ ಆರ್ಚರಿಪಟುಗಳು ಕ್ಲೀನ್‌ಸ್ವೀಪ್ ಸಾಧನೆಯ ಹಂತದಲ್ಲಿದ್ದಾರೆ. ಅಲ್ಲದೇ ರಿಕರ್ವ್‌ ವಿಭಾಗದಲ್ಲಿ ಮತ್ತೆರಡು ಪದಕಗಳನ್ನು ಬುಧವಾರ ಖಚಿತಪಡಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಕಾಂಪೌಂಡ್‌ ವೈಯಕ್ತಿಕ ವಿಭಾಗದಲ್ಲಿ ಅಭಿಷೇಕ್ ವರ್ಮಾ ಹಾಗೂ ಅಮಿತ್ ಫೈನಲ್ ತಲುಪಿದರು. ಸೆಮಿಫೈನಲ್‌ಗಳಲ್ಲಿ ಅಭಿಷೇಕ್‌ 148–140 ಪಾಯಿಂಟ್ಸ್‌ನಿಂದ ಕಜಕಸ್ತಾನದ ಸ್ರೆಜೆಯ್‌ ಕ್ರಿಸ್ಟಿಚ್‌ ಎದುರು ಗೆದ್ದರೆ, ಅಮಿತ್‌ 146-144 ಭಾರತದವರೇ ಆದ ಕುಶಾಲ್ ದಲಾಲ್ ಅವರನ್ನು ಮಣಿಸಿದರು. ಫೈನಲ್‌ನಲ್ಲಿ ಅಭಿಷೇಕ್ ಹಾಗೂ ಅಮಿತ್ ಸೆಣಸಲಿದ್ದಾರೆ. ಕುಶಾಲ್ ಅವರು ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸುವರು. ಮಹಿಳೆಯರ ಕಾಂಪೌಂಡ್‌ ವೈಯಕ್ತಿಕ ವಿಭಾಗದಲ್ಲೂ ಭಾರತದ ರಾಗಿಣಿ ಮಾರ್ಕೂ ಹಾಗೂ ಪ್ರಗತಿ ಚಿನ್ನದ ಪದಕದ ಸುತ್ತು ಪ್ರವೇಶಿಸಿದರು. ನಾಲ್ಕರ ಘಟ್ಟದ ಸ್ಪರ್ಧೆಗಳಲ್ಲಿ ರಾಗಿಣಿ 146-141ರಿಂದ ಪರ್ಣೀತ್‌ ಕೌರ್ ವಿರುದ್ಧ, ಇಷ್ಟೇ ಅಂತರದಿಂದ ಪ್ರಗತಿ ಕಜಕಸ್ತಾನದ ಅದೆಲ್‌ ಜೆಕ್ಸೆನ್‌ಬಿನೊವಾ ಎದುರು ಗೆಲುವು ಸಾಧಿಸಿದರು. ಪರ್ಣೀತ್‌ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ. ಪುರುಷರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಮೃಣಾಲ್ ಚೌಹಾನ್‌ 6-5ರಿಂದ ಕಜಕಸ್ತಾನದ ಅಲೆಕ್ಸಾಂಡರ್ ಯೆರೆಮೆಂಕೊ ಅವರನ್ನು ಸೋಲಿಸಿ ಫೈನಲ್ ತಲುಪಿದರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಭಾರತದ ಸಂಗೀತಾ 6-4ರಿಂದ ಚೀನಾದ ಯಾನ್‌ ಕ್ಸಿಯೊಲೆ ಅವರನ್ನು ಮಣಿಸಿ ಚಿನ್ನದ ಪದಕದ ಸುತ್ತಿಗೆ ಕಾಲಿಟ್ಟರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.