ಲೈಂಗಿಕ ಕಿರುಕುಳ ಆರೋಪ: ಕುಸ್ತಿಪಟುಗಳ ಪ್ರತಿಭಟನೆಗೆ ಎಎಪಿ ಬೆಂಬಲ ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ದೆಹಲಿ ಶಾಸಕರು, ಪಾಲಿಕೆ ಸದಸ್ಯರು ಸೇರಿ 360 ಹಳ್ಳಿಗಳ ಪ್ರತಿನಿಧಿಗಳು ಜಂತರ್‌ಮಂತರ್‌ಗೆ ಗುರುವಾರ ಭೇಟಿ ನೀಡಿ ಕುಸ್ತಿಪಟುಗಳ ಪ್ರತಿಭಟನೆಯನ್ನು ಬೆಂಬಲಿಸಿ, ಒಗ್ಗಟ್ಟು ಪ್ರದರ್ಶಿಸಲಿದ್ದಾರೆ ಎಂದು ಪಕ್ಷವು ಬುಧವಾರ ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಎಪಿ ದೆಹಲಿ ಘಟಕದ ಸಂಚಾಲಕ ಗೋಪಾಲ್‌ ರೈ, ಪಕ್ಷದ ಪ್ರತಿನಿಧಿಗಳು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಸ್ಥಳಕ್ಕೆ ಭೇಟಿಕೊಡಲಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ (ಡಬ್ಲ್ಯುಎಫ್‌ಐ) ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಜಾಕ್ಕೆ ಆಗ್ರಹಿಸಿ ಕುಸ್ತಿಪಟುಗಳು ಏ.23ರಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದ್ದಾರೆ. ದೇಶಕ್ಕೆ ಕೀರ್ತಿ ತಂದುಕೊಟ್ಟ ಕುಸ್ತಿಪಟುಗಳು ಇಂದು ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕುಸ್ತಿಪಟುಗಳ ಬಗ್ಗೆ ಬಿಜೆಪಿಯು ಅಪಪ್ರಚಾರದಲ್ಲಿ ತೊಡಗಿದೆ. ಇದನ್ನು ಇಡೀ ದೇಶದ ಜನತೆ ನೋಡುತ್ತಿದೆ ಎಂದು ರೈ ಹೇಳಿದರು. ‘ಮಂಗಳವಾರ ಸುರಿಯುವ ಮಳೆಯಲ್ಲೇ ಪ್ರತಿಭಟನನಿರತ ಕುಸ್ತಿಪಟುಗಳು ಕುಳಿತಿದ್ದರು. ಅವರ ಅಹವಾಲು ಆಲಿಸಲು ಪ್ರಧಾನಿಯವರಿಗೆ ಸಮಯವಿಲ್ಲ. ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಮೇಲೆ ಎಫ್‌ಐಆರ್‌ ದಾಖಲಿಸಲು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಆದರೂ ಕ್ರೀಡಾ ಸಚಿವರು ಕುಸ್ತಿಪಟುಗಳ ಅಹವಾಲು ಆಲಿಸಲು ಸಿದ್ಧರಿಲ್ಲ’ ಎಂದು ದೂರಿದರು. ಬಾಲಕಿ ಸೇರಿ ಏಳು ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಬೆದರಿಕೆ ಹಾಕಿರುವ ಡಬ್ಲ್ಯುಎಫ್‌ಐ ಅಧ್ಯಕ್ಷ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.