ಐಎನ್‌ಬಿಎಲ್‌ಗೆ ಸಂಪೂರ್ಣ ನೆರವು: ಮುಖ್ಯಮಂತ್ರಿ ಭರವಸೆ ಬೆಂಗಳೂರು: ‘ಮೊದಲ ಬಾರಿ ಆಯೋಜಿ ಸಲು ಉದ್ದೇಶಿಸಿರುವ ಇಂಡಿಯನ್ ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಲೀಗ್‌ಗೆ ರಾಜ್ಯದಲ್ಲಿ ಎಲ್ಲ ರೀತಿಯ ಸಹಕಾರ, ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಡಿಯನ್ ನ್ಯಾಶನಲ್ ಬ್ಯಾಸ್ಕೆಟ್‌ಬಾಲ್ ಲೀಗ್‌ನ (ಐಎನ್‌ಬಿಲ್‌) ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ದೇಶದಲ್ಲಿ ಕ್ರಿಕೆಟ್‌, ಕಬಡ್ಡಿ, ಫುಟ್‌ಬಾಲ್‌ ಲೀಗ್‌ಗಳು ಯಶಸ್ವಿಯಾಗಿರುವಂತೆಯೇ ಬ್ಯಾಸ್ಕೆಟ್‌ಬಾಲ್‌ ಕ್ರೀಡೆ ಅಭಿವೃದ್ಧಿ ಹೊಂದಬೇಕು; ಯಶಸ್ಸು ಸಾಧಿಸಬೇಕು. ಈ ನಿಟ್ಟಿನಲ್ಲಿ ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ) ಲೀಗ್ ಆಯೋಜನೆಗೆ ಮುಂದಾಗಿರುವುದಕ್ಕೆ ಸಂಸ್ಥೆಯನ್ನು ಅಭಿನಂದಿಸುತ್ತೇನೆ.ಲೀಗ್‌ನಿಂದಾಗಿ ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಆಟಗಾರರು ಬೆಂಗಳೂರಿಗೆ ಬಂದು ಆಡುವಂತಾಗಬೇಕು‘ ಎಂದರು. ‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶದ ಅಥ್ಲೀಟ್‌ಗಳು ಉತ್ತಮ ಸಾಧನೆ ತೋರಿದರು. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಇರುವ 75 ಅಥ್ಲೀಟ್‌ಗಳನ್ನು ಆಯ್ಕೆಮಾಡಿ ತರಬೇತಿ ನೀಡುವ ಯೋಜನೆಯ ಪ್ರಕ್ರಿಯೆ ರಾಜ್ಯದಲ್ಲಿ ಈಗಾಗಲೇ ಆರಂಭಿಸಲಾಗಿದೆ‘ ಎಂದರು. ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದದ ಗೆಹಲೋಟ್‌, ರಾಜ್ಯ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ, ಕ್ರೀಡಾ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶಾಲಿನಿ ರಜನೀಶ್‌, ಬಿಎಫ್‌ಐ ಅಧ್ಯಕ್ಷ ಕೆ.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಚಂದ್ರಮುಖಿ ಶರ್ಮಾ, ಗಾಯಕ ವಿಜಯಪ್ರಕಾಶ್‌, ನಟ ಯಶ್‌ ಮತ್ತಿತರರಿದ್ದರು. ಬ್ಯಾಂಕ್‌ ಆಫ್‌ ಬರೋಡಾಗೆ ಜಯ: ಲೀಗ್ ಪ್ರಯೋಗಾರ್ಥ ನಡೆದ ಬೆಂಗಳೂರು ಓಪನ್ 3X3 ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಬ್ಯಾಂಕ್ ಆಫ್‌ ಬರೋಡಾ ತಂಡವು ಪ್ರಶಸ್ತಿ ಜಯಿಸಿತು. ಮಹಿಳೆಯರ ವಿಭಾಗದಲ್ಲಿ ಬಾಲರ್ಸ್ ತಂಡಕ್ಕೆ ಪ್ರಶಸ್ತಿ ಒಲಿಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.