ಜೂನಿಯರ್ ವಿಶ್ವಕಪ್ ಹಾಕಿ: ನಾಲ್ಕರ ಘಟ್ಟಕ್ಕೆ ಭಾರತ ಯುವ ಪಡೆ ಭುವನೇಶ್ವರ: ಮೊದಲಾರ್ಧದಲ್ಲಿ ಗಳಿಸಿದ ಏಕೈಕ ಗೋಲಿನ ಬಲದಿಂದ ಭಾರತ ತಂಡ ಎಫ್‌ಐಎಚ್‌ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಆತಿಥೇಯರು 1–0 ಅಂತರದಲ್ಲಿ ಜಯ ಗಳಿಸಿದರು. 21ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಶ್ರದ್ಧಾನಂದ ತಿವಾರಿ ಚೆಂಡನ್ನು ಗುರಿ ಮುಟ್ಟಿಸಿದರು. ನಂತರ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿಯ ಹೋರಾಟ ನಡೆಯಿತು. ಆದರೆ ಭಾರತ ಛಲದಿಂದ ಆಡಿ ಗೆಲುವು ತನ್ನದಾಗಿಸಿಕೊಂಡಿತು. ಸೆಮಿಫೈನಲ್‌ನಲ್ಲಿ ಭಾರತ ತಂಡ ಜರ್ಮನಿಯನ್ನು ಎದುರಿಸಲಿದೆ. ಜರ್ಮನಿ, ಅರ್ಜೆಂಟೀನಾ ಸೆಮಿಗೆ ಅರ್ಜೆಂಟೀನಾ ಮತ್ತು ಆರು ಬಾರಿಯ ಚಾಂಪಿಯನ್ ಜರ್ಮನಿ ತಂಡಗಳು ಪ್ರಯಾಸದ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿದವು. ಜರ್ಮನಿ 3–1ರಲ್ಲಿ ಸ್ಪೇನ್ ವಿರುದ್ಧ ಮತ್ತು ಅರ್ಜೆಂಟೀನಾ 2–1ರಲ್ಲಿ ನೆದರ್ಲೆಂಡ್ಸ್ ವಿರುದ್ಧ ಜಯ ಗಳಿಸಿತು. ಎಂಟರ ಘಟ್ಟದ ಮೊದಲ ಪಂದ್ಯದ ನಿಗದಿತ ಅವಧಿಯಲ್ಲಿ ಜರ್ಮನಿ ಮತ್ತು ಸ್ಪೇನ್ 2–2ರಲ್ಲಿ ಡ್ರಾ ಸಾಧಿಸಿದ್ದವು. ಹೀಗಾಗಿ ಶೂಟೌಟ್‌ನಲ್ಲಿ ಫಲಿತಾಂಶ ನಿರ್ಧರಿಸಲಾಯಿತು. ಐದನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಕ್ರಿಸ್ಟೋಫರ್ ಕುಟರ್ ಗಳಿಸಿದ ಗೋಲಿನ ಮೂಲಕ ಜರ್ಮನಿ ಮುನ್ನಡೆ ಸಾಧಿಸಿತ್ತು. ಆರು ನಿಮಿಷಗಳ ನಂತರ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಇಗ್ನೇಷಿಯೊ ಅಬಜೊ ಗೋಲು ಗಳಿಸಿ ಸ್ಪೇನ್‌ಗೆ ಸಮಬಲ ತಂದುಕೊಟ್ಟರು. ನಂತರದ ಎರಡು ಕ್ವಾರ್ಟರ್‌ಗಳಲ್ಲಿ ಉಭಯ ತಂಡಗಳು ಗೋಲು ಗಳಿಸಲು ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. 59ನೇ ನಿಮಿಷದಲ್ಲಿ ಎಡ್ವರ್ಡ್ ಡಿ ಇಗ್ನೇಷಿಯೊ ಸಿಮೊ ಚೆಂಡನ್ನು ಗುರಿ ಮುಟ್ಟಿಸಿ ಸ್ಪೇನ್‌ಗೆ ಮತ್ತೆ ಮುನ್ನಡೆ ಗಳಿಸಿಕೊಟ್ಟರು. ಆದರೆ ಪಟ್ಟು ಬಿಡದ ಜರ್ಮನಿ ಕೊನೆಯ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿತು. ಮಾಸಿ ಫ್ಯಾಂಡಿಟ್‌ ಯಶಸ್ಸು ಸಾಧಿಸಿದರು. ಶೂಟೌಟ್‌ನಲ್ಲಿ ಪಾಲ್ ಸ್ಮಿತ್, ಮೈಕೆಲ್ ಸ್ಟ್ರೂಥ್‌ಆಫ್‌ ಮತ್ತು ಹೇನ್ಸ್ ಮುಲ್ಲರ್ ಚೆಂಡನ್ನು ಗುರಿ ಮುಟ್ಟಿಸಿದರು. ಸ್ಪೇನ್ ಪರ ಜೆರಾರ್ಡ್‌ ಕ್ಲ್ಯಾಪ್ಸ್ ಮಾತ್ರ ಗೋಲು ಗಳಿಸಿದರು. ಎರಡನೇ ಪಂದ್ಯದ 24 ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಅರ್ಜೆಂಟೀನಾ ಮುನ್ನಡೆ ಗಳಿಸಿತು. ಜೊಕಿನ್ ಕ್ರುಗರ್ ಗೋಲು ಗಳಿಸಿದರು. ಮರು ನಿಮಿಷದಲ್ಲಿ ಲಭಿಸಿದ ಪೆನಾಲ್ಟ್‌ ಕಾರ್ನರ್‌ನಲ್ಲಿ ಗೋಲು ಗಳಿಸಿ ಮೈಲ್ಸ್ ಬುಕೆನ್ಸ್‌ ಸಮಬಲ ತಂದುಕೊಟ್ಟರು. ಆದರೆ 59ನೇ ನಿಮಿಷದಲ್ಲಿ ಶೆಲ್ಡನ್ ಶೋಟೆನ್ ‘ಉಡುಗೊರೆ’ ಗೋಲು ನೀಡಿ ನೆದರ್ಲೆಂಡ್ಸ್‌ನ ಕನಸು ಭಗ್ನಗೊಳಿಸಿದರು. ಫ್ರಾನ್ಸ್ 4–0ಯಿಂದ ಮಲೇಷ್ಯಾವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.