ಬ್ರಿಜ್ ವಿರುದ್ಧ ಪ್ರತಿಭಟಿಸುತ್ತಿರುವ ಕುಸ್ತಿಪಟುಗಳನ್ನು ಭೇಟಿಯಾದ ಪಿ.ಟಿ ಉಷಾ ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಅವರು ಜಂತರ್‌ ಮಂಥರ್‌ನಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ಮಹಿಳಾ ಕುಸ್ತಿಪಟುಗಳನ್ನು ಬುಧವಾರ ಭೇಟಿಯಾಗಿ ಬೆಂಬಲದ ಭರವಸೆ ನೀಡಿದ್ದಾರೆ. ತಾವು ಮೊದಲು ಅಥ್ಲೀಟ್‌, ನಂತರ ಆಡಳಿತಗಾರ್ತಿ ಎಂದು ಹೇಳಿದ್ದಾರೆ. ಮಹಿಳೆಯಾಗಿ, ಮಹಿಳಾ ಕುಸ್ತಿಪಟುಗಳ ಹೋರಾಟದ ಬಗ್ಗೆ ಸಂವೇದನಾಶೂನ್ಯ ಹೇಳಿಕೆ ನೀಡಿದ್ದಾರೆ ಎಂಬ ಟೀಕೆಗಳನ್ನು ಮಾಜಿ ಒಲಿಂಪಿಯನ್‌ ಉಷಾ ವಿವಿಧ ವಲಯಗಳಿಂದ ಎದುರಿಸುತ್ತಿದ್ದರು. ‘ಕುಸ್ತಿಪಟುಗಳು ಸಮಸ್ಯೆಗಳ ಬಗ್ಗೆ ಐಒಎಯನ್ನು ಸಂಪರ್ಕಿಸುವ ಬದಲು ಧರಣಿ ಪುನರಾರಂಭಿಸಿದ್ದು ಸರಿಯಲ್ಲ’ ಎಂದು ಉಷಾ ಕಳೆದ ವಾರ ಹೇಳಿದ್ದರು. ಕುಸ್ತಿಪಟುಗಳು ಶಿಸ್ತು ಪ್ರದರ್ಶಿಸಬೇಕಿತ್ತು. ಬೀದಿಗಿಳಿಯುವ ಮೂಲಕ ದೇಶದ ವರ್ಚಸ್ಸಿಗೆ ಕಳಂಕ ಮೆತ್ತಿದ್ದಾರೆ ಎಂದು ಹೇಳಿದ್ದು ಐಒಎ ವಿರುದ್ಧವೂ ಟೀಕೆಗೆ ಕಾರಣವಾಗಿತ್ತು. ಈ ಭೇಟಿಯ ವೇಳೆ ಕುಸ್ತಿಪಟುಗಳೊಂದಿಗೆ ಕುಳಿತು ಮಾತುಕತೆ ನಡೆಸಿದ ಅವರು, ಕ್ರೀಡಾಪಟುಗಳ ಮನಸ್ಸಿನ ಮಾತನ್ನು ಕ್ರೀಡಾ ಸಚಿವರು ಹಾಗೂ ಸಂಬಂಧಿಸಿದ ಪ್ರಾಧಿಕಾರಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. # | ' 11 . ../Vs3Lp1ZHaO ಕುಸ್ತಿಪಟುಗಳನ್ನು ಭೇಟಿಯಾದ ಬಳಿಕ ಉಷಾ ಮಾಧ್ಯಮಗಳ ಜೊತೆ ಮಾತನಾಡಲಿಲ್ಲ. ಆದರೆ ಭಜರಂಗ್ ಪೂನಿಯಾ ಮಾತನಾಡಿ, ‘ತಮ್ಮ ಹೋರಾಟಕ್ಕೆ ನೆರವಾಗುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದರು. ‘ಆರಂಭದಲ್ಲಿ ಉಷಾ ಹೇಳಿಕೆಯಿಂದ ನಮಗೆಲ್ಲಾ ಬೇಸರವಾಗಿತ್ತು. ಆದರೆ ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು (ಉಷಾ) ಹೇಳಿದರು. ತಾವು ಮೊದಲು ಅಥ್ಲೀಟ್‌, ನಂತರ ಆಡಳಿತಗಾರ್ತಿ ಎಂದೂ ಹೇಳಿದರು’ ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಜರಂಗ್ ಹೇಳಿದರು. ‘ನಮಗೆ ನ್ಯಾಯ ಬೇಕು. ನಮ್ಮ ಹೋರಾಟ ಸರ್ಕಾರದ, ವಿರೋಧ ಪಕ್ಷಗಳ ವಿರುದ್ಧ ಅಲ್ಲ. ಕುಸ್ತಿಯ ಒಳಿತಿಗಾಗಿ ನಾವಿಲ್ಲಿ ಕುಳಿತಿದ್ದೇವೆ. ಈ ಸಮಸ್ಯೆ ಬಗೆಹರಿಸಬೇಕು. ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಆರೋಪಗಳು ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದಷ್ಟೇ ನಾವು ಕೇಳಿದ್ದೇವೆ’ ಎಂದರು. ಸರ್ಕಾರದ ಕಡೆಯಿಂದ ಉಷಾ ಏನಾದರೂ ಪರಿಹಾರ ಸೂತ್ರ ಮುಂದಿಟ್ಟರೇ ಎಂಬ ಪ್ರಶ್ನೆಗೆ ‘ಅಂಥದ್ದೇನೂ ನಡೆದಿಲ್ಲ, ನಮ್ಮ ಜೊತೆ ಇದ್ದೇನೆ ಎಂದಷ್ಟೇ ಅವರು ಹೇಳಿದರು’ ಎಂದು ಪ್ರತಿಕ್ರಿಯಿಸಿದರು. ಉಷಾ ಭೇಟಿಯ ನಂತರ ಸಮಾಧಾನ ಆಗಿದೆಯೇ ಎಂದು ಕೇಳಿದ್ದಕ್ಕೆ, ‘ಅವರು ಭರವಸೆ ಕೊಟ್ಟಲ್ಲಿ, ಅದನ್ನು ಈಡೇರಿಸಬೇಕೆಂಬುದು ನಮ್ಮ ಅಪೇಕ್ಷೆ. ಸಮಸ್ಯೆಗಳಿಗೆ ಪರಿಹಾರ ಸಿಕ್ಕಿ ನಮಗೆ ನ್ಯಾಯ ದೊರಕುವ ವಿಶ್ವಾಸವಿದೆ. ಅದಾಗದಿದ್ದಲ್ಲಿ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದು ನಾವು ಅವರಿಗೆ ಸ್ಪಷ್ಟಪಡಿಸಿದ್ದೇವೆ’ ಎಂದರು. ‘ಅವರು ಆಡಿದ ಮಾತುಗಳ ಪ್ರಕಾರ ನಡೆದುಕೊಂಡು, ಅದೇ ದಾರಿಯಲ್ಲಿ ಕ್ರಮಗಳನ್ನು ಕೈಗೊಂಡರೆ ಖಂಡಿತ ಈ ವಿಷಯದಲ್ಲಿ ಪರಿಹಾರ ಸಿಗುತ್ತದೆ. ನಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. ಅವರು ಬಯಸಿದ್ದಲ್ಲಿ ಏನು ಬೇಕಾದರೂ ಮಾಡಲು ಸಾಧ್ಯವಿದೆ’ ಎಂದರು. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಜಂತರ್ ಮಂತರ್‌ನಲ್ಲಿ ಕುಸ್ತಿ‍‍ಪಟುಗಳು ಕಳೆದ 11 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.