ಅಖಿಲ ಭಾರತ ಪೊಲೀಸ್ ಹಾಕಿ: ಸಿಐಎಸ್‌ಎಫ್‌ಗೆ ಮಣಿದ ಬಂಗಾಳ ಪೊಲೀಸ್‌ ಬೆಂಗಳೂರು: ದ್ವಿತೀಯಾರ್ಧದಲ್ಲಿ ಗಳಿಸಿದ ಎರಡು ಗೋಲುಗಳ ಬಲದಿಂದ ದೆಹಲಿಯ ರಾಷ್ಟ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಗೆಲುವಿನ ನಗೆ ಬೀರಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಅಂಗಣದಲ್ಲಿ ಶನಿವಾರ ನಡೆದ ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸಿಐಎಸ್‌ಎಫ್‌ 2–1ರಲ್ಲಿ ಪಶ್ಚಿಮ ಬಂಗಾಳ ಪೊಲೀಸ್‌ ತಂಡವನ್ನು ಮಣಿಸಿತು. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. 40ನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲು ಮೂಡಿಬಂತು. ಸುಶೀಲ್ ಕುಲ್ಲು ಗಳಿಸಿದ ಗೋಲಿನ ಮೂಲಕ ಸಿಐಎಸ್‌ಎಫ್‌ ಮುನ್ನಡೆ ಗಳಿಸಿತು. 46ನೇ ನಿಮಿಷದಲ್ಲಿ ಏಂಜೆಲ್ ಮಿನ್ಜ್‌ ಅವರು ಮುನ್ನಡೆಯನ್ನು ಇಮ್ಮಡಿಗೊಳಿಸಿದರು. ಮರು ನಿಮಿಷದಲ್ಲಿ ಬಂಗಾಳ ತಂಡದ ನಾಯಕ ಪ್ರಮೋದ್ ಕುಮಾರ್ ಸಿಂಗ್ ಚೆಂಡನ್ನು ಗುರಿ ಮುಟ್ಟಿಸಿ ಪಂದ್ಯವನ್ನು ರೋಚಕವಾಗಿಸಿದರು. ಆದರೆ ಎದುರಾಳಿಗಳ ಗೋಡೆಯನ್ನು ಕೆಡವಲು ಸಾಧ್ಯವಾಗದೆ ತಂಡ ಸೋಲೊಪ್ಪಿಕೊಂಡಿತು. ಮತ್ತೊಂದು ಪಂದ್ಯದಲ್ಲಿ ಮಹಾರಾಷ್ಟ್ರ ರಾಜ್ಯ ಪೊಲೀಸ್ ತಂಡವನ್ನು ತಮಿಳುನಾಡು ಪೊಲೀಸ್ ತಂಡ 2–1ರಲ್ಲಿ ಸೋಲಿಸಿತು. ಎಂ.ಕಲಿರಾಜ್ (9ನೇ ನಿಮಿಷ) ಮತ್ತು ವಿ.ಸುರೇಂದರ್ (41ನೇ ನಿ) ತಮಿಳುನಾಡು ಪರ ಗೋಲು ಗಳಿಸಿದರೆ ಪೃಥ್ವಿರಾಜ್ ಸಾಳುಂಕೆ (33ನೇ ನಿ) ಮಹಾರಾಷ್ಟ್ರ ಪೊಲೀಸರಿಗೆ ಗೋಲು ತಂದುಕೊಟ್ಟರು. ಜಲಂಧರ್‌ನ ಐಟಿಬಿಪಿ 19–2ರಲ್ಲಿ ರಾಜಸ್ಥಾನ್ ಪೊಲೀಸ್ ವಿರುದ್ಧ, ಛತ್ತೀಸ್‌ಗಢ ಪೊಲೀಸ್ 6–1ರಲ್ಲಿ ಪುದುಚೇರಿ ಪೊಲೀಸ್ ಎದುರು ಜಯ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.