ಹಾಕಿ: ಪಂಜಾಬ್‌ ಪೊಲೀಸ್‌, ಎಸ್‌ಎಸ್‌ಬಿಗೆ ಪ್ರಶಸ್ತಿ ಬೆಂಗಳೂರು: ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ವಿರುದ್ಧ ಭರ್ಜರಿ ಜಯ ಗಳಿಸಿದ ಪಂಜಾಬ್ ಪೊಲೀಸ್ ತಂಡ ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಅಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ 7–1ರಿಂದ ಜಯ ಸಾಧಿಸಿತು. ದೆಹಲಿ ಸಿಆರ್‌ಪಿಎಫ್‌ ತಂಡವನ್ನು 3–1ರಲ್ಲಿ ಮಣಿಸಿದ ‘ಸಶಸ್ತ್ರ ಸೀಮಾ ಬಲ್‌’ (ಎಸ್‌ಎಸ್‌ಬಿ) ಮಹಿಳಾ ವಿಭಾಗದ ಚಿನ್ನದ ಪದಕವನ್ನು ಗಳಿಸಿತು. ಭರವಸೆಯ ಸ್ಟ್ರೈಕರ್ ರಮಣ್‌ ದೀಪ್ ಸಿಂಗ್ ಗಾಯಗೊಂಡು ಹೊರಗುಳಿದಿದ್ದರೂ ಪಂಜಾಬ್ ಪೊಲೀಸ್ ತಂಡದವರು ಎದೆಗುಂದಲಿಲ್ಲ. ಆಕ್ರಮಣಕಾರಿ ಆಟದೊಂದಿಗೆ ಆರಂಭದಲ್ಲೇ ಎದುರಾಳಿಗಳಲ್ಲಿ ಆತಂಕ ಮೂಡಿಸಿದ ತಂಡ ಪ್ರತಿ ಕ್ವಾರ್ಟರ್‌ನಲ್ಲೂ ಗೋಲು ಗಳಿಸಿತು. ಹರದೀಪ್ ಸಿಂಗ್ (14ನೇ ನಿಮಿಷ), ಕರಣ್‌ಬೀರ್ ಸಿಂಗ್ (17, 39ನೇ ನಿ), ಕನ್ವರ್‌ಜೀತ್ ಸಿಂಗ್ (20ನೇ ನಿ), ನಾಯಕ ದೂಪಿಂದರ್ ದೀಪ್ ಸಿಂಗ್ (41ನೇ ನಿ), ಜಗಮೀತ್ ಸಿಂಗ್ (53ನೇ ನಿ), ಬಲ್ವಿಂದರ್ ಸಿಂಗ್ (55ನೇ ನಿ) ಚೆಂಡನ್ನು ಗುರಿಮುಟ್ಟಿಸಿದರು. ಐಟಿಬಿಪಿ ಪರವಾಗಿ ಏಕೈಕ ಗೋಲು ಗಳಿಸಿದವರು ಸುನಿಲ್ ಕಿಜೂರ್ (27ನೇ ನಿ). ಮಹಿಳಾ ವಿಭಾಗದಲ್ಲಿ ರೋಚಕ ಪೈಪೋಟಿ ಕಂಡುಬಂತು. ರಂಜಿತಾ ಮಿನೆಜ್ (15ನೇ ನಿ) ಮೂಲಕ ಖಾತೆ ತೆರೆದ ಎಸ್‌ಎಸ್‌ಬಿ 34ನೇ ನಿಮಿಷದಲ್ಲಿ ಭಾರತಿ ಠಾಕೂರ್ ಮೂಲಕ ಸಿಆರ್‌ಪಿಎಫ್ ತಿರುಗೇಟು ನೀಡಿತು. 44ನೇ ನಿಮಿಷದಲ್ಲಿ ಮ್ಯಾಕ್ಸಿಮಾ ಎಕ್ಕಾ ಮತ್ತು 45ನೇ ನಿಮಿಷದಲ್ಲಿ ರಜನಿ ಬಾರ್ಲ ಗಳಿಸಿದ ಗೋಲುಗಳ ಮೂಲಕ ಎಸ್‌ಎಸ್‌ಬಿ ಜಯ ಗಳಿಸಿತು. ಪುರುಷರ ಕಂಚಿನ ಪದಕದ ಪಂದ್ಯದಲ್ಲಿ ತಮಿಳುನಾಡು ಆರು ಗೋಲು ಗಳಿಸಿದರೆ ಕರ್ನಾಟಕಕ್ಕೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಎಂ.ವಿಜಯ್‌ (27 ಮತ್ತು 45ನೇ ನಿ), ಬಿ. ಅರುಣಾಚಲಂ (34 ಮತ್ತು 47ನೇ ನಿ), ಎಂ.ಬಾಲಮುರುಗನ್‌ (55 ಮತ್ತು 60ನೇ ನಿ) ಗೋಲು ಗಳಿಸಿದರು. ಮಹಿಳಾ ವಿಭಾಗದಲ್ಲಿ ಒಡಿಶಾ ಪೊಲೀಸ್‌ 6–0ಯಿಂದ ಮಹಾರಾಷ್ಟ್ರ ರಾಜ್ಯ ಪೊಲೀಸ್ ತಂಡವನ್ನು ಮಣಿಸಿ ಮೂರನೇ ಸ್ಥಾನ ಗಳಿಸಿತು. ನಾಯಕಿ ರಶ್ಮಿತಾ ಮಿನೆಜ್ (6, 23, 37 ಮತ್ತು 39ನೇ ನಿ), ಪ್ರಮಿತಾ ಟೊಪ್ಪೊ (38ನೇ ನಿ) ಮತ್ತು ಎಲಿನ್ ಲಾಕ್ರ (56ನೇ ನಿ) ಚೆಂಡನ್ನು ಗುರಿಸೇರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.