ಪೊಲೀಸ್ ಹಾಕಿ: ಪ್ರಶಸ್ತಿಗಾಗಿ ಐಟಿಬಿಪಿ–ಪಂಜಾಬ್ ಪೈಪೋಟಿ ಬೆಂಗಳೂರು: ಪಂಜಾಬ್ ಪೊಲೀಸ್ ಮತ್ತು ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ತಂಡಗಳು ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್‌ಷಿಪ್‌ನ ಪ್ರಶಸ್ತಿಗಾಗಿ ಸೆಣಸಲಿವೆ. ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ಪೊಲೀಸ್ 5–1ರಿಂದ ತಮಿಳುನಾಡು ಪೊಲೀಸ್ ತಂಡವನ್ನು ಮಣಿಸಿತು. ಐಟಿಬಿಪಿ ಎದುರಿನ ನಾಲ್ಕರ ಘಟ್ಟದ ಪಂದ್ಯದಲ್ಲಿ ಕರ್ನಾಟಕ ತಂಡ ಶೂಟೌಟ್‌ನಲ್ಲಿ 2–0ಯಿಂದ ಸೋತಿತು. ತಂಡದ ಕಂಚಿನ ಪದಕದ ಕನಸು ಜೀವಂತವಾಗಿದೆ. ಭರವಸೆಯಿಂದ ಕಣಕ್ಕೆ ಇಳಿದಿದ್ದ ಆತಿಥೇಯ ತಂಡ ಅತ್ಯಮೋಘ ಆಟವಾಡಿ ಗಮನ ಸೆಳೆಯಿತು. ಬಲಿಷ್ಠ ಐಟಿಬಿಪಿಗೆ ಪ್ರಬಲ ಪೈಪೋಟಿ ನೀಡುವಲ್ಲಿ ಯಶಸ್ವಿಯಾಯಿತು. ನಿಗದಿತ ಅವಧಿಯಲ್ಲಿ ಪಂದ್ಯ 1–1ರಲ್ಲಿ ಸಮವಾಯಿತು. ಹೀಗಾಗಿ ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಬೇಕಾಯಿತು. ಪಂದ್ಯದ ಎರಡನೇ ಕ್ವಾರ್ಟರ್‌ನಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ರವಿ ಗ್ಸೆಸ್‌ (21ನೇ ನಿಮಿಷ) ಐಟಿಬಿಪಿಗೆ ಮುನ್ನಡೆ ಗಳಿಸಿಕೊಟ್ಟರು. ಪಟ್ಟುಹಿಡಿದು ಕಾದಾಡಿದ ಕರ್ನಾಟಕ ಪೊಲೀಸ್ 57ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತು. ವೆಂಕಟೇಶ್ ಕ್ಯಾರಕಟ್ಟಿ ಚೆಂಡನ್ನು ಗುರಿಮುಟ್ಟಿಸಿದರು. ಪಂಜಾಬ್ ತಂಡದ ಎದುರು ತಮಿಳುನಾಡು ತಂಡದ ಕಸನು ಕಮರಿ ಹೋಯಿತು. ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ಪಂಜಾಬ್ ಪೊಲೀಸ್ ಎರಡು ಗೋಲು ಗಳಿಸಿತು. 25 ಮತ್ತು 27ನೇ ನಿಮಿಷದಲ್ಲಿ ರಮಣ್‌ದೀಪ್ ಸಿಂಗ್ ಚೆಂಡನ್ನು ಗುರಿಸೇರಿಸಿದರು. 30ನೇ ನಿಮಿಷದಲ್ಲಿ ವರಿಂದರ್ ಸಿಂಗ್ ಮತ್ತು 31ನೇ ನಿಮಿಷದಲ್ಲಿ ದೂಪಿಂದರ್ ದೀಪ್ ಸಿಂಗ್ ಗಳಿಸಿದ ಗೋಲುಗಳೊಂದಿಗೆ ತಂಡದ ಮುನ್ನಡೆ ಇನ್ನಷ್ಟು ಹೆಚ್ಚಿತು. ತಮಿಳುನಾಡು ತಂಡಕ್ಕಾಗಿ ಎಂ.ಬಾಲಮುರುಗನ್‌ (33ನೇ ನಿ) ಏಕೈಕ ಗೋಲು ಗಳಿಸಿದರು. ಸಿಆರ್‌ಪಿಎಫ್‌–ಎಸ್‌ಎಸ್‌ಬಿ ಮುಖಾಮುಖಿ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ದೆಹಲಿಯ ಸಿಆರ್‌ಪಿಎಫ್ ಮತ್ತು ‘ಸಶಸ್ತ್ರ ಸೀಮಾ ಬಲ್’ (ಎಸ್‌ಎಸ್‌ಬಿ) ತಂಡಗಳು ಸೆಣಸಲಿವೆ. ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಸಿಆರ್‌ಪಿಎಫ್‌ 13–0ಯಿಂದ ಮಹಾರಾಷ್ಟ್ರ ರಾಜ್ಯ ಪೊಲೀಸ್ ವಿರುದ್ಧ ಜಯ ಗಳಿಸಿತು. ಎಸ್‌ಎಸ್‌ಬಿ 6–0ಯಿಂದ ಒಡಿಶಾ ಎಫ್‌ಸಿಯನ್ನು ಸೋಲಿಸಿತು. ಇಂದಿನ ಪಂದ್ಯಗಳು ಕಂಚಿನ ಪದಕದ ಹಣಾಹಣಿ ಕರ್ನಾಟಕ–ತಮಿಳುನಾಡು ಆರಂಭ: ಬೆಳಿಗ್ಗೆ 11.00 ಫೈನಲ್ ಪಂಜಾಬ್ ಪೊಲೀಸ್‌–ಐಟಿಬಿಪಿ ಜಲಂಧರ್ ಆರಂಭ: ಮಧ್ಯಾಹ್ನ 3.15 ಮಹಿಳಾ ವಿಭಾಗ: ಕಂಚಿನ ಪದಕದ ಪಂದ್ಯ ಒಡಿಶಾ ಪೊಲೀಸ್‌–ಮಹಾರಾಷ್ಟ್ರ ಪೊಲೀಸ್ ಆರಂಭ: ಬೆಳಿಗ್ಗೆ 7.00 ಫೈನಲ್‌ ಸಿಆರ್‌ಪಿಎಫ್‌ ದೆಹಲಿ–ಎಸ್‌ಎಸ್‌ಬಿ ಬೆಳಿಗ್ಗೆ 9.00 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.