ಕ್ರೀಡಾಪಟುಗಳಿಗೆ ಸನ್ಮಾನ: ಪ್ಯಾರಾ ಶೂಟರ್‌ ಹರ್ಷ ದೇವರೆಡ್ಡಿ ಸಲಹೆ ಹುಬ್ಬಳ್ಳಿ: ‘ದೇಹದ ನ್ಯೂನತೆಯ ಕಾರಣಕ್ಕೆ ಹಿಂಜರಿದು ಕ್ರೀಡಾಪಟುಗಳು ಮತ್ತು ಕ್ರೀಡೆಯಲ್ಲಿ ಆಸಕ್ತಿ ಇರುವವರು ಸಾಧನೆಯ ಹಾದಿಯಿಂದ ಹಿಂದೆ ಸರಿಯಬಾರದು. ನಿಮಗೆ ನೀವೇ ಸ್ಫೂರ್ತಿ’ ಎಂದು ಪ್ಯಾರಾ ಶೂಟರ್‌ ಹರ್ಷ ದೇವರೆಡ್ಡಿ ಹೇಳಿದರು. ಟೈ ಹುಬ್ಬಳ್ಳಿ ಸಂಸ್ಥೆ ಇಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಾಧನೆಗೆ ನ್ಯೂನತೆ ಅಡ್ಡಿಯಾಗಬಾರದು. ಕೇಂದ್ರ ಕ್ರೀಡಾ ಸಚಿವರು ಪ್ಯಾರಾ ಕ್ರೀಡಾಪಟುಗಳಿಗೂ ಖೇಲೊ ಇಂಡಿಯಾ ಅಭಿಯಾನ ವಿಸ್ತರಿಸಿರುವುದು ಖುಷಿ ನೀಡಿದೆ. ಅಂಗವಿಕಲರಿಗೂ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕು’ ಎಂದು ಕರೆ ನೀಡಿದರು. ಸೈಕ್ಲಿಸ್ಟ್‌ ಮೇಘಾ ಗೂಗಾಡ ಮಾತನಾಡಿ, ‘ಹಲವು ಮಹಿಳಾ ಕ್ರೀಡಾಪಟುಗಳಿಗೆ ಮದುವೆಯ ನಂತರ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಹಲವು ಕ್ರೀಡಾಪಟುಗಳು ಕ್ರೀಡೆಯಿಂದ ಹಿಂದೆ ಸರಿಯುತ್ತಾರೆ. ಈ ರೀತಿ ಆಗಬಾರದು, ಮದುವೆಯ ನಂತರವೂ ಹೆಣ್ಣು ಮಕ್ಕಳಿಗೆ ಕ್ರೀಡೆಯ‌ಲ್ಲಿ ಭಾಗವಹಿಸಲು ಕುಟುಂಬಸ್ಥರು ಬೆಂಬಲ ನೀಡಬೇಕು’ ಎಂದರು. ಟೈ ಸಂಸ್ಥೆ ಅಧ್ಯಕ್ಷ ವಿಜೇಶ್‌ ಸೈಗಲ್‌ ಮಾತನಾಡಿ, ‘ಬೆಳಗಾವಿ ಮತ್ತು ಧಾರವಾಡದ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದು, ಉದ್ಯಮಿಗಳು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ, ಆರ್ಥಿಕ ನೆರವು ನೀಡಬೇಕು. ಆಗ ಅವರಿಗೆ ಇನ್ನಷ್ಟು ಎತ್ತರದ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು. ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಸಂತ ಹೊರಟ್ಟಿ, ಟೈ ಹುಬ್ಬಳ್ಳಿ ಸಂಸ್ಥೆ ಸಂಸ್ಥಾಪಕ ಸಂತೋಷ್ ಹುರಳಿಕೊಪ್ಪಿ, ಉಪಾಧ್ಯಕ್ಷ ಶರ್ವಾಣಿ ಪವಾರ್‌, ಕಾರ್ಯದರ್ಶಿ ಗಿರೀಶ್‌ ಮಾನೆ ಇದ್ದರು. ಸನ್ಮಾನಿತರು: ತನಿಶಾ ಶೀತಲ್‌ ಗೋಟಡ್ಕಿ (ಚೆಸ್‌), ಹರ್ಷ ದೇವರೆಡ್ಡಿ (ಪ್ಯಾರಾ ಶೂಟಿಂಗ್‌), ಸನಾ ಮಳಗಿ (ಪವರ್‌ ಲಿಫ್ಟಿಂಗ್‌), ಮೊಹಮ್ಮದ್‌ ರಫೀಕ್‌ (ಕುಸ್ತಿ), ರಜತ್‌ ಕಾಂಬ್ಳೆ (ಪವರ್‌ ಲಿಫ್ಟಿಂಗ್‌), ಅಲ್ಫಿಯಾ ಬಸರಿ (ಬ್ಯಾಡ್ಮಿಂಟನ್), ಸಿದ್ಧಾರ್ಥ ಬಳ್ಳಾರಿ (ಪ್ಯಾರಾ ಅಥ್ಲೀಟ್‌), ಅಂಜನಾ ರವೀಂದ್ರ ಶೆಣೈ (ಅಥ್ಲೆಟಿಕ್ಸ್‌), ರವೀಂದ್ರ ಶೆಣೈ (ಅಥ್ಲೆಟಿಕ್ಸ್‌), ಅಶ್ವಿನ್ ದರ್ಶನ್‌ ಶೆಟ್ಟಿಯಾರ್‌ (ಕರಾಟೆ), ರಾಕೇಶ್‌ ನಿಡಗುಂದಿ (ಪ್ಯಾರಾ ಶೂಟರ್‌), ಜ್ಯೋತಿ ಸಣ್ಣಕ್ಕಿ (ಪ್ಯಾರಾ ಶೂಟರ್‌),ಮೆಹಬೂಬ್ ಸಾಹಬ್ ಪಟ್ಟಣಕುಡಿ (ಬಾಡಿ ಬಿಲ್ಡಿಂಗ್‌ ಮತ್ತು ವೇಟ್‌ಲಿಫ್ಟಿಂಗ್‌), ದೀಪಾಲಿ ಗೋಟಡ್ಕಿ (ಟೇಬಲ್‌ ಟೆನಿಸ್‌), ಡಾ.ಕೆ. ಶಾಂತಲಾ ಯೋಗಿ (ಬ್ಯಾಸ್ಕೆಟ್‌ಬಾಲ್‌ ಹಾಗೂ ಬ್ಯಾಡ್ಮಿಂಟನ್‌), ಮೇಘಾ ಗೂಗಾಡ, ಸಂದೇಶ ಉಪ್ಪಾರ್‌ (ಇಬ್ಬರೂ ಸೈಕ್ಲಿಸ್ಟ್‌),ಅಭಿಷೇಕ್ ತೋಟಗಿ (ಕರಾಟೆ),ವಿವೇಕ ಪಾಟೀಲ (ಥ್ರೋಬಾಲ್‌), ಭವ್ಯ ಜೈನ್‌ (ಕರಾಟೆ). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.