ಹಾಂಗ್‌ಕಾಂಗ್‌: ಸ್ಪ್ರಿಂಟ್‌ ರೇಸ್‌ನಲ್ಲಿ ದುರ್ಘಟನೆ; ಎರಡು ಕುದುರೆಗಳಿಗೆ ದಯಾಮರಣ ಹಾಂಗ್‌ಕಾಂಗ್‌: ರೇಸ್‌ನಲ್ಲಿ ಕುದುರೆಯೊಂದು ಮುಗ್ಗರಿಸಿ ಬಿದ್ದ ಪರಿಣಾಮ ಮೂವರು ಜಾಕಿಗಳು ಗಾಯಗೊಂಡು,ಎರಡು ಅಶ್ವಗಳಿಗೆ ದಯಾಮರಣ ನೀಡಿದ ಘಟನೆ ಭಾನುವಾರ ಇಲ್ಲಿ ನಡೆದಿದೆ. ಇಲ್ಲಿನ ಪ್ರಸಿದ್ಧ ಶಾ ಟಿನ್‌ ಟ್ರ್ಯಾಕ್‌ನಲ್ಲಿ ನಡೆಯುತ್ತಿರುವ ಹಾಂಗ್‌ಕಾಂಗ್‌ ಗುಂಪು ಒಂದರ ರೇಸ್‌ನ ಐದನೇ ದಿನ ಜಾಕಿ ಲೈಲ್‌ ಹೆವಿಸ್ಟನ್‌ ಸವಾರಿ ಮಾಡುತ್ತಿದ್ದ ಕುದುರೆ ಮುಗ್ಗರಿಸಿ ಬಿತ್ತು. ಇದರಿಂದಾಗಿ ನಾಗಾಲೋಟದಲ್ಲಿದ್ದ ಜಾಕ್‌ ಪ್ಯೂರ್ಟನ್‌ ಅವರ ಲಕ್ಕಿ ಪ್ಯಾಚ್‌ ಹಾಗೂ ಕ್ಯಾರಿಸ್‌ ಟೀಟನ್ ಅವರ ನಬೂ ಅಟ್ಯಾಕ್‌ ಮತ್ತು ಯೂಚಿ ಫುಕುನಗಾ ಅವರ ಪಿಕ್ಸಿ ನೈಟ್‌ ಹೆಸರಿನ ಅಶ್ವಗಳು ಎಡವಿ ಬಿದ್ದವು. ಘಟನೆಯಲ್ಲಿ ಗಾಯಗೊಂಡ ಸವಾರರಾದ ಪ್ಯೂರ್ಟನ್‌, ಹೆವಿಸ್ಟನ್‌ ಮತ್ತು ಫುಕುನಗಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹಾಂಗ್‌ಕಾಂಗ್‌ ಜಾಕಿ ಕ್ಲಬ್ ಹೇಳಿದೆ. ತೀವ್ರ ಗಾಯಗೊಂಡಿದ್ದ ಅಮೇಜಿಂಗ್‌ ಸ್ಟಾರ್‌, ನಬೂ ಅಟ್ಯಾಕ್‌ ಕುದುರೆಗಳಿಗೆ ದಯಾಮರಣ ನೀಡಲಾಯಿತು. ಘಟನೆಯಲ್ಲಿ ಯಾವುದೇ ರೀತಿಯ ಗಾಯಗೊಳ್ಳದ ಟೀಟನ್ ರೇಸ್‌ಅನ್ನು ಪೂರ್ಣಗೊಳಿಸಿತು. ಜಾಕಿ ಬ್ಲೇಕ್‌ ಶಿನ್‌ ಸವಾರಿ ಮಾಡುತ್ತಿದ್ದ ಕ್ಯಾಸ್ಪರ್‌ ಫೌನೆಸ್‌ ರೇಸ್‌ನಲ್ಲಿ ವಿಜಯ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.