ಯುವಭಾರತಕ್ಕೆ ‘ಹ್ಯಾಟ್ರಿಕ್’ ಪ್ರಶಸ್ತಿ ನಿರೀಕ್ಷೆ ಢಾಕಾ: ಯುವ ಆಟಗಾರರನ್ನು ಒಳಗೊಂಡ ಭಾರತ ಹಾಕಿ ತಂಡ ಹೊಸ ಸವಾಲಿಗೆ ಸಜ್ಜಾಗಿದೆ. ಮಂಗಳವಾರ ಆರಂಭವಾಗಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿಯ ಕನಸು ಹೊತ್ತು ತಂಡ ಕಣಕ್ಕೆ ಇಳಿಯಲಿದೆ. ಭಾರತ ಮೊದಲ ದಿನ ಕೊರಿಯಾವನ್ನು ಎದುರಿಸಲಿದೆ. ಭಾರತ 2011ರಲ್ಲಿ ಮೊದಲ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿತ್ತು. ಈ ವರೆಗೆ ಮೂರು ಬಾರಿ ಚಾಂಪಿಯನ್‌ ಆಗಿದೆ. ಹಿಂದಿನ ಎರಡು ಆವೃತ್ತಿಗಳಲ್ಲಿ ಪ್ರಶಸ್ತಿ ಜಯಿಸಿರುವ ತಂಡ ಈಗ ಹ್ಯಾಟ್ರಿಕ್ ಸಾಧನೆಯ ಕನಸಿನಲ್ಲಿದೆ. ಮಸ್ಕತ್‌ನಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯಲ್ಲಿ ಭಾರತ ತಂಡ ಪಾಕಿಸ್ತಾನದೊಂದಿಗೆ ಪ್ರಶಸ್ತಿ ಹಂಚಿಕೊಂಡಿತ್ತು. ಮಳೆಯಿಂದಾಗಿ ಫೈನಲ್ ಪಂದ್ಯವನ್ನು ರದ್ದು ಮಾಡಿದ್ದರಿಂದ ಎರಡೂ ತಂಡಗಳನ್ನು ವಿಜಯಿ ಎಂದು ಘೋಷಿಸಲಾಗಿತ್ತು. ಕೋವಿಡ್‌ ಕಾರಣದಿಂದ ಈ ಬಾರಿ ಬಲಿಷ್ಠ ಮಲೇಷ್ಯಾ ಆಡುತ್ತಿಲ್ಲ. ಆದ್ದರಿಂದ ಭಾರತದ ಭರವಸೆ ಹೆಚ್ಚಿದೆ. ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಇದೇ ಮೊದಲ ಬಾರಿ ಭಾರತ ತಂಡ ಕಣಕ್ಕೆ ಇಳಿಯುತ್ತಿದ್ದು ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ತಂಡದ ಶಕ್ತಿಯಾಗಿದ್ದಾರೆ. ‘ಒಲಿಂಪಿಕ್ಸ್‌ ನಂತರ ಇದು ನಮ್ಮ ಮೊದಲ ಟೂರ್ನಿ ಆಗಿರುವುದರಿಂದ ವಿಶೇಷ ಎನಿಸಿಕೊಂಡಿದೆ. ತಂಡ ಈ ಮೂಲಕ ಹೊಸ ಅಧ್ಯಾಯಕ್ಕೆ ಅಣಿಯಾಗುತ್ತಿದೆ. ಮೊದಲ ಪಂದ್ಯದಲ್ಲೇ ಉತ್ತಮ ಆರಂಭ ಕಂಡರೆ ಭರವಸೆ ಹೆಚ್ಚಲಿದೆ. ಆ ಮೂಲಕ ಪ್ರಶಸ್ತಿ ಗೆಲ್ಲುವತ್ತ ಅಡಿಯಿಡಬಹುದಾಗಿದೆ’ ಎಂದು ಮನ್‌ಪ್ರೀತ್ ಸಿಂಗ್ ಹೇಳಿದರು. ‘ಕೆಲವು ಆಟಗಾರರು ಹಿಂದಿನ ಎರಡು ವರ್ಷಗಳಿಂದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ತಂಡ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿದ್ದ ಕಾರಣ ಕೆಲವರನ್ನು ಕಣಕ್ಕೆ ಇಳಿಸಲು ಸಾಧ್ಯವಾಗಿರಲಿಲ್ಲ. ಅವರಿಗೆಲ್ಲ ಈಗ ಅವಕಾಶದ ಬಾಗಿಲು ತೆರೆದಿದೆ’ ಎಂದು ಮನ್‌ಪ್ರೀತ್ ತಿಳಿಸಿದರು. ‘ತಂಡ ಈಗಲೂ ಬಲಿಷ್ಠವಾಗಿದೆ. ಭುವನೇಶ್ವರದಲ್ಲಿ ನಡೆದ ಶಿಬಿರದಲ್ಲಿ ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಏಷ್ಯಾದ ಇತರ ತಂಡಗಳು ಯಾವ ರೀತಿ ಸಜ್ಜಾಗಿವೆ ಎಂಬುದನ್ನು ಈ ಟೂರ್ನಿಯಲ್ಲಿ ನೋಡಬೇಕಷ್ಟೆ. ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಟೂರ್ನಿ ನಮ್ಮ ತಂಡಕ್ಕೆ ಉತ್ತಮ ಅವಕಾಶ ಒದಗಿಸಲಿದೆ’ ಎಂದು ಅವರು ಹೇಳಿದರು. ಭಾರತದ ಪಂದ್ಯಗಳು ದಿನಾಂಕ;ಎದುರಾಳಿ;ಸಮಯ ಡಿ.14;ಕೊರಿಯಾ;ಮ.3.00 ಡಿ.15;ಬಾಂಗ್ಲಾದೇಶ;ಮ.3.00 ಡಿ.17;ಪಾಕಿಸ್ತಾನ;ಮ.3.00 ಡಿ.19;ಜಪಾನ್;ಮ.3.00 ಸಮಯ: ಭಾರತೀಯ ಕಾಲಮಾನ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ಟೂರ್ನಿಯ ಅವಧಿ ಡಿ.14ರಿಂದ ಡಿ.22 ಒಟ್ಟು ತಂಡಗಳು 6 ಭಾರತದ ಸಾಧನೆ ಪಾಲ್ಗೊಂಡ ಆವೃತ್ತಿಗಳು 6 ಗೆದ್ದ ಪ್ರಶಸ್ತಿಗಳು 3 (2011, 2016, 2018) ಕೊರಿಯಾ ಬಲಿಷ್ಠ ತಂಡವಾಗಿದೆ. ನಮ್ಮ ಆಕ್ರಮಣಕ್ಕೆ ಸವಾಲೆಸೆಯುವ ಸಾಮರ್ಥ್ಯ ಆ ತಂಡಕ್ಕೆ ಇದೆ. ಹೀಗಿದ್ದರೂ ನಾವು ಎದೆಗುಂದದೆ ದಿಟ್ಟತನದಿಂದ ಆಡಲಿದ್ದೇವೆ. ಮನ್‌ಪ್ರೀತ್ ಸಿಂಗ್ ಭಾರತ ತಂಡದ ನಾಯಕ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.