ಫಾರ್ಮುಲಾ–1 ಫೈನಲ್: ವಿವಾದ ಅಲೆ ನವದೆಹಲಿ: ದುಬೈನಲ್ಲಿ ಭಾನುವಾರ ಕೊನೆಗೊಂಡ ಈ ವರ್ಷದ ಫಾರ್ಮುಲಾ–1 ರೇಸ್‌ ಬಗ್ಗೆ ವಿವಾದದ ಅಲೆ ಎದ್ದಿದೆ. ಅನಗತ್ಯ ರೇಸ್‌ ನಿಯಂತ್ರಣ ‘ಕಾಲ್‌’ಗಳ ಮೂಲಕ ಪ್ರಮುಖರ ಎದೆಗುಂದಿಸುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮರ್ಸಿಡಿಸ್‌ ಚಾಲಕ, ಬ್ರಿಟನ್‌ನ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಹಿಂದಿಕ್ಕಿ ರೆಡ್‌ಬುಲ್ ಚಾಲಕ ನೆದರ್ಲೆಂಡ್ಸ್‌ನ ಮ್ಯಾಕ್ಸ್ ವರ್ಸ್ಟಾಪ‍ನ್ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ರೇಸ್‌ನಲ್ಲಿ ಗೆದ್ದಿದ್ದರೆ ದಾಖಲೆಯ ಎಂಟನೇ ಪ್ರಶಸ್ತಿ ಗೆದ್ದ ಸಾಧನೆ ಹ್ಯಾಮಿಲ್ಟನ್ ಅವರದಾಗುತ್ತಿತ್ತು. ವರ್ಸ್ಟಾಪ‍ನ್ ಅವರನ್ನು ಗೆಲ್ಲಿಸುವುದಾಗಿ ನಿರ್ಧರಿಸಿಯೇ ಕೆಲವರು ರಂಗಕ್ಕೆ ಇಳಿದಂತೆ ಇತ್ತು ಎಂದು ಭಾರತದ ಮೊದಲ ಫಾರ್ಮುಲಾ–1 ಚಾಂಪಿಯನ್ ನಾರಾಯಣ್ ಕಾರ್ತಿಕೇಯನ್ ಅಭಿಪ್ರಾಯಪಟ್ಟಿದ್ದಾರೆ. ‘ರೇಸ್ ಉದ್ದಕ್ಕೂ ಸಂದೇಹಗಳಿಗೆ ಎಡೆಮಾಡುವ ಪ್ರಸಂಗಗಳು ನಡೆದಿದ್ದವು. ಚಾಂಪಿಯನ್‌ಷಿಪ್‌ಗೆ ಭಾರಿ ಪೈಪೋಟಿ ನಡೆದಿತ್ತು. ಫಾರ್ಮುಲಾ–1ನಲ್ಲಿ ಇದು ಸಹಜ ಕೂಡ. ಆದರೆ ಭಾನುವಾರದ ಸ್ಪರ್ಧೆ ಅಹಿತಕರವಾಗಿತ್ತು’ ಎಂದು ಕಾರ್ತಿಕೇಯನ್ ಹೇಳಿದರು. 58 ಲ್ಯಾಪ್‌ಗಳ ರೇಸ್‌ನಲ್ಲಿ ಹ್ಯಾಮಿಲ್ಟನ್ ವಿಜಯದತ್ತ ಮುನ್ನುಗ್ಗಿದ್ದರು. ಆದರೆ 53ನೇ ಲ್ಯಾಪ್‌ನಲ್ಲಿ ನಿಕೋಲಸ್‌ ಲತೀಫ್ ಅವರ ವಾಹನ ಅಪಘಾತಕ್ಕೊಳಗಾಯಿತು. ಹೀಗಾಗಿ ಸುರಕ್ಷತಾ ಕಾರನ್ನು ಟ್ರ್ಯಾಕ್‌ಗೆ ಇಳಿಸಲಾಗಿತ್ತು. ವರ್ಸ್ಟಾಪ‍ನ್ ವಾಹನಕ್ಕೆ ಮೃದು ಟೈರ್‌ಗಳನ್ನು ಅಳವಡಿಸಲು ಅವಕಾಶ ನೀಡಿದರೆ ಹ್ಯಾಮಿಲ್ಟನ್ ಗಡುಸು ಟೈರ್‌ಗಳನ್ನು ಬಳಸಿಕೊಂಡೇ ಚಲಾಯಿಸಿದರು. ಕೊನೆಯ ಲ್ಯಾಪ್‌ನಲ್ಲಿ ರೇಸ್ ನಿರ್ದೇಶಕ ಮೈಕೆಲ್ ಮ್ಯಾಸಿ ಐವರು ಬ್ಯಾಕ್ ಮಾರ್ಕರ್‌ಗಳಿಗೆ ಅವಕಾಶ ನೀಡಿ ದಶಕದಲ್ಲೇ ದೊಡ್ಡ ಪ್ರಮಾದ ಎಸಗಿದ್ದರು. ಇದರಿಂದ ವರ್ಸ್ಟಾಪ‍ನ್ ಗೆಲುುವು ಅತಿ ಸುಲಭವಾಯಿತು ಎಂಬ ದೂರುಗಳು ಕೇಳಿಬಂದಿವೆ. ಫೈನಲ್ ನಂತರ ಸಾಮಾಜಿಕ ತಾಣಗಳಲ್ಲೂ ಭಾರಿ ಚರ್ಚೆ ನಡೆದಿದ್ದು ರೇಸ್ ನಿರ್ದೇಶಕರ ವಿರುದ್ಧ ಅನೇಕರು ಟೀಕಾಪ್ರಹಾರ ಮಾಡಿದ್ದಾರೆ. ಸುರಕ್ಷತಾ ಕಾರು ಬಳಸುವ ಅವಧಿಯನ್ನು ಮುಗಿಸಿದ ವಿವಾದಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ಜಾರ್ಜ್ ರಸೆಲ್ ‘ಮ್ಯಾಕ್ಸ್ ಅತ್ಯುತ್ತಮ ಚಾಲಕನಾಗಿದ್ದು ಈ ಋತುವಿನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಆದರೆ ಭಾನುವಾರ ಆಗಿರುವ ಪ್ರಮಾದಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ‘ ಎಂದಿದ್ದಾರೆ. ಫಾರ್ಮುಲಾ–1 ಮಾಜಿ ಚಾಂಪಿಯನ್ ಡ್ಯಾಮನ್ ಹಿಲ್, ಫುಟ್‌ಬಾಲ್ ಆಟಗಾರ ಹ್ಯಾರಿ ಕೇನ್‌ ಮುಂತಾದವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಜಿ ಚಾಲಕ ಜಾಕಿ ಸ್ಟೀವರ್ಟ್‌ ಮತ್ತು ಕೆಲವರು ವರ್ಸ್ಟಾಪ‍ನ್ ಸಾಧನೆಯನ್ನು ಕೊಂಡಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.