ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ: ತಪ್ಪೊಪ್ಪಿಕೊಂಡ ಆ್ಯಗ್ನೆಲ್‌ ಮುಲ್‌ಹೌಸ್‌, ಫ್ರಾನ್ಸ್‌:‍ ಪರಿಚಿತ ಬಾಲಕಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಒಲಿಂಪಿಯನ್ ಈಜುಪಟು ಫ್ರಾನ್ಸ್‌ನ ಯಾನಿಕ್ ಆ್ಯಗ್ನೆಲ್ ಒಪ್ಪಿಕೊಂಡಿದ್ದಾರೆ ಎಂದು ವಕೀಲರು ಸೋಮವಾರ ತಿಳಿಸಿದ್ದಾರೆ. 2012ರ ಒಲಿಂಪಿಕ್ಸ್‌ನಲ್ಲಿಆ್ಯಗ್ನೆಲ್ ಎರಡು ಚಿನ್ನದ ಪದಕ ಗೆದ್ದುಕೊಂಡಿದ್ದರು. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ 29 ವರ್ಷ ವಯಸ್ಸಿನ ಅವರನ್ನು ಪ್ಯಾರಿಸ್‌ನಲ್ಲಿ ಗುರುವಾರ ಬಂಧಿಸಲಾಗಿತ್ತು. 2016ರಲ್ಲಿ 13 ವರ್ಷದವಳಾಗಿದ್ದ ಬಾಲಕಿಯ ಮೇಲೆ ಆ್ಯಗ್ನೆಲ್ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಲಾಗಿದೆ. 2010ರ ಯುರೋಪಿಯನ್ ಚಾಂಪಿಯನ್‌ಷಿಪ್‌ನ 400 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಫ್ರಾನ್ಸ್ ಮತ್ತು ಚಾಂಪಿಯನ್‌ಷಿಪ್‌ ದಾಖಲೆಯ ಮೂಲಕ ಅವರು ಗಮನ ಸೆಳೆದಿದ್ದರು. ಎರಡು ವರ್ಷಗಳ ನಂತರ ಲಂಡನ್ ಒಲಿಂಪಿಕ್ಸ್‌ನ 200 ಮೀಟರ್ಸ್ ಫ್ರೀಸ್ಟೈಲ್ ಮತ್ತು4x100 ಮೀಟರ್ಸ್ ಫ್ರೀಸ್ಟೈಲ್ ರಿಲೆಯಲ್ಲಿ ಚಿನ್ನ ಗೆದ್ದುಕೊಂಡಿದ್ದರು. 2013ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಈ ಎರಡು ವಿಭಾಗಗಳಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ್ದರು. ರಿಯೊ ಒಲಿಂಪಿಕ್ಸ್‌ನ ಹೀಟ್ಸ್‌ನಲ್ಲೇ ಸೋತು ಹೊರಬಿದ್ದಿದ್ದ ಅವರು ಕೆಲವೇ ದಿನಗಳ ನಂತರ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.