ನಮ್ಮ ಗದಗ ಕ್ರಿಕೆರ್ಟ್ಸ್ ತಂಡಕ್ಕೆ ಭರ್ಜರಿ ಗೆಲುವು ಹುಬ್ಬಳ್ಳಿ: ನಮ್ಮ ಗದಗ ಕ್ರಿಕೆರ್ಟ್ಸ್ ತಂಡವು ಯಶಸ್‌ ಕುರಬರ ಅವರ 82 ರನ್‌ಗಳ ನೆರವಿನಿಂದ ಸಫ್ರಾನ್‌ ಸ್ಟ್ರೈಕರ್ಸ್‌ ತಂಡದ ವಿರುದ್ಧ 119 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಬಾಣಜಿ ಡಿ. ಕಿಮ್ಜಿ ಮೈದಾನದಲ್ಲಿ ಹುಬ್ಬಳ್ಳಿ ಪ್ರೀಮಿಯರ್ ಲೀಗ್‌ ಜೂನಿಯರ್‌ ಕ್ರಿಕೆಟ್‌ ಟೂರ್ನಿಯ ನಾಲ್ಕನೇ ಆವೃತ್ತಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿಮೊದಲ ಬ್ಯಾಟ್‌ ಮಾಡಿದ ನಮ್ಮ ಗದಗ ಕ್ರಿಕೆರ್ಟ್ಸ್ ತಂಡವು 30 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 236 ರನ್‌ ಗಳಿಸಿತು. ನಂತರ ಬ್ಯಾಟಿಂಗ್‌ ಮಾಡಿದ ಸಫ್ರಾನ್‌ ಸ್ಟ್ರೈಕರ್ಸ್‌ ತಂಡವು 20 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 117 ರನ್‌ ಗಳಿಸಲಷ್ಟೇ ಶಕ್ತವಾಯಿತು. ಧಾರವಾಡದ ಗಾಡ್‌ಗಿಫ್ಟ್‌ ವಾರಿಯರ್ಸ್‌ ತಂಡವು 24.1 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 107 ರನ್‌ ಗಳಿಸಿತು. ಇದಕ್ಕುತ್ತರವಾಗಿ ಹುಬ್ಬಳ್ಳಿಯ ಎಸ್‌ಆರ್‌ಎಂ ಪಿಂಕ್‌ ಪ್ಯಾಂಥರ್ಸ್ ತಂಡವು 22.3 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 111 ರನ್ ಗಳಿಸಿ, ಏಳು ವಿಕೆಟ್‌ಗಳಿಂದ ಜಯ ಗಳಿಸಿತು. ಆ್ಯಕ್ಸಸ್‌ ಹುಬ್ಬಳ್ಳಿ ಮಾಸ್ಟರ್ಸ್‌ ತಂಡ 21.5 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 55 ರನ್‌ ಗಳಿಸಿತು. ವಿವಿ ಸೂಪರ್‌ ಕಿಂಗ್ಸ್‌ ತಂಡವು 9.4 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 61 ರನ್‌ ಗಳಿಸಿ ಎಂಟು ವಿಕೆಟ್‌ಗಳಿಂದ ಜಯ ಗಳಿಸಿತು. ತಂಡದ ಪರವಾಗಿ ಮಣಿಕಂಠ ಬಿ ಅವರು ಆರು ರನ್‌ಗೆ 3 ವಿಕೆಟ್‌ ಗಳಿಸಿದ್ದಲ್ಲದೇ, ಅಜೇಯ 13 ರನ್‌ ಹೊಡೆದರೆ, ವೀರಜ್‌ ಹಾವೇರಿ ಅಜೇಯ 38 ರನ್‌ ಹೊಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೊಂದು ಪಂದ್ಯದಲ್ಲಿ ದುರ್ಗ ಟೈಟನ್ಸ್ ತಂಡವು 24.5 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 56 ರನ್‌ ಗಳಿಸಿತು. ಬೆಳಗಾವಿಯ ಬಿಎಸ್‌ಸಿ ಕೆ.ಆರ್‌. ಶೆಟ್ಟಿ ಕಿಂಗ್ಸ್ ತಂಡವು 10.3 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 57 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಶೆಟ್ಟಿ ಕಿಂಗ್ಸ್ ತಂಡದ ಸಿದ್ದೇಶ ಎ, ಐದು ರನ್‌ ನೀಡಿ ಮೂರು ವಿಕೆಟ್‌ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.