ಡಿವೈಇಎಸ್‌ ಮಾಜಿ ಅಧಿಕಾರಿ ಆನಂದನ್‌ ನಿಧನ ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ಎ.ಜೆ. ಆನಂದನ್ (85) ನಗರದಲ್ಲಿ ಬುಧವಾರ ನಿಧನರಾದರು. ಡಿಜಿಯಾಗಿ ನಿವೃತ್ತರಾಗಿದ್ದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. 1982ರಲ್ಲಿ ಕೂಡಿಗೆಯಲ್ಲಿ ಮೊದಲ ಕ್ರೀಡಾ ಶಾಲೆ ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ರಾಜ್ಯ ಕ್ರೀಡಾ ಸಮಿತಿಯ ಚೇರ್ಮನ್ ಆಗಿಯೂ ಸೆಂಚುರಿ ಕ್ಲಬ್‌ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ಪೊಲೀಸ್ ಕಂಟ್ರೋಲ್ ಬೋರ್ಡ್‌ ಅಧ್ಯಕ್ಷರಾಗಿದ್ದಾಗ 100 ಮಂದಿ ಕ್ರೀಡಾಪಟುಗಳನ್ನು ಇಲಾಖೆಯಲ್ಲಿ ನೇಮಕ ಮಾಡಲು ಕಾರಣರಾಗಿದ್ದರು. ಜಿಲ್ಲಾ ಮಟ್ಟದಲ್ಲಿ ಕ್ರೀಡಾ ವಸತಿನಿಲಯಗಳ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಆನಂದನ್‌ 12ರಿಂದ 15 ವರ್ಷದೊಳಗಿನ ಮಕ್ಕಳಿಗೆ ವಸತಿನಿಲಯಗಳಲ್ಲಿ ಅವಕಾಶ ನೀಡುವ ವಿಷಯದಲ್ಲೂ ಕಾಳಜಿ ವಹಿಸಿದ್ದರು. 1996ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಯಶಸ್ಸಿಗೂ ಕಾರಣರಾಗಿದ್ದರು. ‘ರಾಜ್ಯದ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಅಮೂಲ್ಯವಾದ ಕೊಡುಗೆ ನೀಡಿದವರು ಆನಂದನ್. ಕೂಡಿಗೆ ಕ್ರೀಡಾ ಶಾಲೆಯ ಸ್ಥಾಪನೆಗೆ ಪ್ರಮುಖ ಕಾರಣರಾಗಿದ್ದರು’ ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜ್ ಸ್ಮರಿಸಿದ್ದಾರೆ. ವಿಜಯಪುರದಲ್ಲಿ ಸೈಕ್ಲಿಂಗ್ ಕ್ರೀಡಾ ವಸತಿ ನಿಲಯದ ಆರಂಭದಲ್ಲಿಯೂ ಆನಂದನ್ ಪಾತ್ರ ಪ್ರಮುಖವಾಗಿತ್ತು. ಕ್ರೀಡಾ ಮೀಸಲಾತಿ ಮತ್ತು ಮಾಜಿ ಕುಸ್ತಿಪಟುಗಳಿಗೆ ಮಾಸಾಶನ ಯೋಜನೆಯನ್ನು ಜಾರಿಗೆ ತರಲು ಶ್ರಮಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.