ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್‌ಗೆ ಅಗ್ರಶ್ರೇಯಾಂಕ ನವದೆಹಲಿ: ಕಿದಂಬಿ ಶ್ರೀಕಾಂತ್ ಮತ್ತು ಪಿ.ವಿ. ಸಿಂಧು ಅವರು ಇದೇ 11ರಿಂದ ನಡೆಯಲಿರುವ ಯೊನೇಕ್ಸ್‌ ಸನ್‌ರೈಸ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಗ್ರಶ್ರೇಯಾಂಕದೊಂದಿಗೆ ಕಣಕ್ಕಿಳಿಯುವರು. ಈಚೆಗೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ. ಈ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಲೋಹ್ ಕೀನ್ ಯೂ ಮತ್ತು ಕಂಚಿನ ಪದಕವಿಜೇತ, ಭಾರತದ ಲಕ್ಷ್ಯ ಸೇನ್ ಕೂಡ ಇದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಧು, ಸೈನಾ ನೆಹ್ವಾಲ್, ಥಾಯ್ಲೆಂಡ್‌ನ ಬುಸಾನನ್ ಆಂಗ್‌ಬಮ್, ರುಂಗ್‌ಪಾನ್ ಮತ್ತು ಸಿಂಗಪುರದ ಜಿಯಾ ಮಿನ್ ಯೆವ್ ಆಡಲಿದ್ದಾರೆ. ಎರಡು ವರ್ಷಗಳ ನಂತರ ಈ ಟೂರ್ನಿ ನಡೆಯಲಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ಆವೃತ್ತಿಗಳು ನಡೆದಿರಲಿಲ್ಲ. ಈ ಬಾರಿ ಟೂರ್ನಿಗೆ ಪ್ರೇಕ್ಷಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ’ದೆಹಲಿಯಲ್ಲಿ ನಡೆಯುವ ಇಂಡಿಯಾ ಓಪನ್‌ನಲ್ಲಿ ಆಡಲು ಬಹುದಿನಗಳಿಂದ ಕಾತುರಳಾಗಿದ್ದೆ. ಇಲ್ಲಿ ಯಾವಾಗಲೂ ಅಭಿಮಾನಿಗಳಿಂದ ತುಂಬಿದ ವಾತಾವರಣವಿರುತ್ತಿತ್ತು. ಆದರೆ, ಈ ಬಾರಿ ಪ್ರೇಕ್ಷಕರಿಲ್ಲದೇ ಆಡುವುದು ಸ್ವಲ್ಪ ಕಷ್ಟದ ಕೆಲಸ‘ ಎಂದು ಸಿಂಧು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.