ಮಹಾಪಂಚಾಯತ್‌ ಯಶಸ್ವಿ: ಕುಸ್ತಿಪಟುಗಳ ವಿಶ್ವಾಸ ನವದೆಹಲಿ : ಜಂತರ್‌ಮಂಥರ್‌ನಲ್ಲಿ ಭಾನುವಾರ ನಿಗದಿಯಾಗಿರುವ ಖಾಪ್ ಮಹಾಪಂಚಾಯತ್‌ ಭಾರಿ ಯಶಸ್ವಿಯಾಗಲಿದೆ ಎಂದು ಪ್ರತಿಭಟನನಿರತ ಕುಸ್ತಿಪಟುಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬ್ರಿಜ್‌ಭೂಷಣ್ ಶರಣ್‌ ಸಿಂಗ್ ವಿರುದ್ಧದ ಹೋರಾಟಕ್ಕೆ ಇದರಿಂದ ಹೆಚ್ಚು ಬೆಂಬಲ ದೊರೆಯಲಿದೆ ಎಂದು ಅವರು ಹೇಳಿದ್ದಾರೆ. ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ದೇಶದ ಪ್ರಮುಖ ಕುಸ್ತಿಪಟುಗಳು ಕ್ರಮಕ್ಕೆ ಒತ್ತಾಯಿಸಿ ಏಪ್ರಿಲ್ 23ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ‘ಜಂತರ್‌ ಮಂಥರ್‌ನಲ್ಲಿ ನಾವು ಧರಣಿ ಕುಳಿತು 14 ದಿನಗಳಾದವು. ನಮ್ಮನ್ನು ಬೆಂಬಲಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು. ಈ ಖಾಪ್‌ (ಸಮುದಾಯದ ಹಿರಿಯರ ಪಂಚಾಯ್ತಿ) ಮಹಾ ಪಂಚಾಯತ್‌ ಯಶಸ್ವಿಯಾಗಲಿದೆ. ಆಗ ಸತ್ಯವೂ ಬಹಿರಂಗವಾಗಲಿದೆ‘ ಎಂದು ಕುಸ್ತಿಪಟು ವಿನೇಶಾ ಪೋಗಟ್‌ ಹೇಳಿದ್ದಾರೆ. ‘ಪ್ರತಿಭಟನೆಯನ್ನು ದುಷ್ಟಶಕ್ತಿಗಳು ಹೈಜಾಕ್‌ ಮಾಡಲು ಅವಕಾಶ ನೀಡದಂತೆ ನಮ್ಮ ಬೆಂಬಲಿಗರು ಭಾನುವಾರ ಶಾಂತರೀತಿಯಿಂದ ವರ್ತಿಸಬೇಕು’ ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.