ಪ್ರೊ ಕಬಡ್ಡಿ: ಟೈ ಪಂದ್ಯದಲ್ಲಿ ಹರಿಯಾಣ ಬೆಂಗಳೂರು: ಹರಿಯಾಣ ಸ್ಟೀಲರ್ಸ್ ಮತ್ತು ತೆಲುಗು ಟೈಟನ್ಸ್‌ ತಂಡಗಳ ನಡುವಣ ಪಂದ್ಯವು ರೋಚಕ ಟೈನಲ್ಲಿ ಅಂತ್ಯವಾಯಿತು. ವೈಟ್‌ಫೀಲ್ಡ್‌ನ ಗ್ರ್ಯಾಂಡ್ ಶೆರಟನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಹರಿಯಾಣ 39–39ರಿಂದ ಟೈಟನ್ಸ್‌ ವಿರುದ್ಧ ಸಮಬಲ ಸಾಧಿಸಿತು. ‌‌ ಉಭಯ ತಂಡಗಳು ಆರಂಭದಿಂದಲೇ ತುರುಸಿನ ಪೈಪೋಟಿ ನಡೆಸಿದವು. ಅರ್ಧವಿರಾಮದ ವೇಳೆಗೆ ಹರಿಯಾಣ (20–19) ತಂಡವು ಒಂದು ಅಂಕದಿಂದ ಮುನ್ನಡೆ ಯಲ್ಲಿತ್ತು. ಕೊನೆಯವರೆಗೂ ಇದೇ ರೀತಿಯ ಹಣಾಹಣಿ ನಡೆಯಿತು. ಹರಿಯಾಣ ತಂಡದ ರೇಡರ್ ವಿಕಾಶ್ ಖಂಡೊಲಾ ಹತ್ತು ಅಂಕ ಗಳಿಸಿದರು. ರೋಹಿತ್ ಗುಲಿಯಾ ಮತ್ತು ವಿನಯ್ ತಲಾ ಎಂಟು ಅಂಕ ಗಳಿಸಿದರು. ಟೈಟನ್ಸ್ ತಂಡದ ಅಂಕಿತ್ ಬೆನಿವಾಲ್ 10 ಅಂಕ ಗಳಿಸಿ ಮಿಂಚಿದರು. ಅವರಿಗೆ ರೋಹಿತ್ ಕುಮಾರ್ (8) ಮತ್ತು ಸಂದೀಪ್ ಖಂಡೋಲಾ (6) ಉತ್ತಮ ಜೊತೆ ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.