ಸೈಯದ್‌ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ: ಸಿಂಧುಗೆ ಸುಲಭ ಗೆಲುವು ಲಖನೌ: ಸುಲಭ ಜಯ ಸಂಪಾದಿಸಿದ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ. ಸಿಂಧು ಅವರು ಸೈಯದ್‌ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಕಾಲಿಟ್ಟರು. ಬಾಬು ಬನಾರಸಿ ದಾಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಸುತ್ತಿನ ಹಣಾಹಣಿಯಲ್ಲಿ ಬುಧವಾರ ಸಿಂಧು21-9, 21-9ರಿಂದ ಸ್ವದೇಶದ ಆಟಗಾರ್ತಿ ತಾನಿಯಾ ಹೇಮಂತ್‌ ಅವರನ್ನು ಸೋಲಿಸಿದರು. ಇಂಡಿಯಾ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದ ಸಿಂಧು ಅವರಿಗೆ ಮುಂದಿನ ಸುತ್ತಿನಲ್ಲಿ ಅಮೆರಿಕದ ಲಾರೆನ್‌ ಲ್ಯಾಮ್ ಸವಾಲು ಎದುರಾಗಲಿದೆ. ಮೊದಲ ಸುತ್ತಿನ ಮತ್ತೊಂದು ಸೆಣಸಾಟದಲ್ಲಿ ಲಾರೆನ್‌ 15-21, 21-16, 21-16ರಿಂದ ಭಾರತದ ಇರಾ ಶರ್ಮಾ ಅವರನ್ನು ಮಣಿಸಿದರು. ಮತ್ತೊಂದು ಜಿದ್ದಾಜಿದ್ದಿನ ಪಂದ್ಯದಲ್ಲಿ ಭಾರತದ ಕನಿಕಾ ಕನ್ವಾಲ್‌21-15, 16-21, 21-6ರಿಂದ ಅಮೆರಿಕದ ದಿಶಾ ಗುಪ್ತಾ ವಿರುದ್ಧ ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.