ಬ್ಯಾಡ್ಮಿಂಟನ್ ಟೂರ್ನಿ; ಎಂಟರ ಘಟ್ಟಕ್ಕೆ ಸಿಂಧು, ಪ್ರಣಯ್ ಲಖನೌ: ಎದುರಾಳಿಯ ವಿರುದ್ಧ ಸುಲಭ ಜಯ ಸಾಧಿಸಿದ ಪಿ.ವಿ.ಸಿಂಧು ಅವರು ಸೈಯದ್ ಮೋದಿ ಅಂತರರಾಷ್ಟ್ರೀಯ ಸೂಪರ್ 300 ‌ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಕಠಿಣ ಸವಾಲು ಮೀರಿ ನಿಂತ ಎಚ್‌.ಎಸ್‌.ಪ್ರಣಯ್‌ ಕೂಡ ಎಂಟರ ಘಟ್ಟಕ್ಕೆ ಲಗ್ಗೆ ಇರಿಸಿದರು. ಬಿಬಿಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಹಿಳಾ ವಿಭಾಗದ ಅಗ್ರ ಶ್ರೇಯಾಂಕಿತೆ ಸಿಂಧು ಅಮೆರಿಕದ ಲಾರೆನ್ ಲ್ಯಾಮ್ ಎದುರು 21–16, 21–13ರಲ್ಲಿ ಗೆಲುವು ಸಾಧಿಸಿದರು. ಪ್ರಣಯ್‌ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದವರೇ ಆದ ಪ್ರಿಯಾಂಶು ರಾಜಾವತ್‌ ಅವರನ್ನು 21-11, 16-21, 21-18ರಲ್ಲಿ ಮಣಿಸಿದರು. ಮಾಜಿ ವಿಶ್ವ ಚಾಂಪಿಯನ್‌ ಹಾಗೂ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಮುಂದಿನ ಪಂದ್ಯದಲ್ಲಿ ಆರನೇ ಶ್ರೇಯಾಂಕಿತೆ, ಥಾಯ್ಲೆಂಡ್‌ನ ಸುಪನಿಡ ಕಟೆಥಾಂಗ್‌ ಅವರನ್ನು ಎದುರಿಸುವರು. ಇಂಡಿಯನ್‌ ಓಪನ್‌ ಟೂರ್ನಿಯಲ್ಲೂ ಎಂಟರ ಘಟ್ಟದಲ್ಲಿ ಸಿಂಧು ಮತ್ತು ಕಟೆಥಾಂಗ್ ಎದುರಾಗಿದ್ದರು. ಎಡಗೈ ಆಟಗಾರ್ತಿ ಕಟೆಥಾಂಗ್ ಆ ಪಂದ್ಯದಲ್ಲಿ ಗೆದ್ದಿದ್ದರು. ಪ್ರಣಯ್‌ಗೆ ಮುಂದಿನ ಹಂತದಲ್ಲಿ ಫ್ರಾನ್ಸ್‌ನ ಅರ್ನಾಡ್ ಮೆರ್ಕಲ್ ಎದುರಾಳಿ. ಭಾರತದ ಕಾರ್ತಿಕೇಯ್‌ ಗುಲ್ಶನ್ ಕುಮಾರ್ ವಿರುದ್ಧ 21-8, 21-12ರಲ್ಲಿ ಜಯ ಗಳಿಸಿ ಅರ್ನಾಡ್ ಎಂಟರ ಘಟ್ಟ ಪ್ರವೇಶಿಸಿದ್ದಾರೆ. ಆಕರ್ಷಿ–ಮಾಳವಿಕಾ ಮುಖಾಮುಖಿ ಭಾರತದ ಆಕರ್ಷಿ ಕಶ್ಯಪ್ ಮತ್ತು ಮಾಳವಿಕಾ ಬಾನ್ಸೋದ್ ಅವರು ಮಹಿಳಾ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗುವರು. ಗುರುವಾರದ ಪಂದ್ಯದಲ್ಲಿ ಆಕರ್ಷಿ 21-9, 21-6ರಲ್ಲಿ ಸಾಯ್ ಉತ್ತೇಜಿತಾ ರಾವ್ ಎದುರು ಜಯ ಗಳಿಸಿದರೆ ಮಾಳವಿಕಾ21-10, 21-8ರಲ್ಲಿ ಪ್ರೇರಣಾ ನೀಲೂರಿ ವಿರುದ್ಧ ಗೆದ್ದರು. ಭಾರತದ ಸಾಮಿಯಾ ಇಮದ್ ಫಾರೂಕಿ 21-6, 21-15ರಲ್ಲಿ ಕನಿಕಾ ಕನ್ವಲ್ ಅವರನ್ನು ಮಣಿಸಿದರು. ಅನುಪಮಾ ಉಪಾಧ್ಯಾಯ 21-12, 21-19ರಲ್ಲಿ ಸ್ಮಿತ್ ತೋಶ್ನಿವಾಲ್‌ ಎದುರು ಗೆದ್ದರು. ಪ್ರಬಲ ಹೋರಾಟ ಪ್ರದರ್ಶಿಸಿದ ಮಿಥುನ್‌ ಪುರುಷರ ವಿಭಾಗದಲ್ಲಿ ಭಾರತದ ಮಿಥುನ್ ಮಂಜುನಾಥ್ ಮತ್ತು ಮಲೇಷ್ಯಾದ ಸೂಂಗ್ ಜೂ ವೆನ್‌ ನಡುವಿನ ಹೋರಾಟ ರೋಚಕವಾಗಿತ್ತು. ಒಂದು ತಾಸು 20 ನಿಮಿಷಗಳ ಹಣಾಹಣಿಯಲ್ಲಿ ಮಿಥುನ್ 16-21, 21-16, 23-21ರಲ್ಲಿ ಜಯ ದಾಖಲಿಸಿದರು. ಆದರೆ ಚಿರಾಗ್ ಸೇನ್‌, ಕೌಶನ್‌ ಧರ್ಮಮೇರ್‌ ಮತ್ತು ರಘು ಮರಿಸ್ವಾಮಿ ಅವರ ಹೋರಾಟ ಅಂತ್ಯಗೊಂಡಿತು. ರಷ್ಯಾದ ಸರ್ಜಿ ಸಿರಾಂತ್‌ 18-21, 22-20, 21-12ರಲ್ಲಿ ಚಿರಾಗ್‌ ಸೇನ್ ಅವರನ್ನು ಮಣಿಸಿದರೆ ಮಲೇಷ್ಯಾದ ಚೀಮ್‌ ಜುನ್‌ ವೀಗೆ ಕುಶಾಲ್16-21, 13-21ರಲ್ಲಿ ಮಣಿದರು. ರಘು9-21, 9-21ರಲ್ಲಿ ಫ್ರಾನ್ಸ್‌ನ ಲೂಕಾಸ್ ಕ್ಲೀರ್‌ಬಾಟ್‌ ಎದುರು ಸೋತರು. ಪುರುಷರ ಡಬಲ್ಸ್ ವಿಭಾಗದಲ್ಲಿ ನಾಲ್ಕನೇ ಶ್ರೇಯಾಂಕದ ಎಂ.ಆರ್‌.ಅರ್ಜುನ್ ಮತ್ತು ಧ್ರುವ್‌ ಕಪಿಲ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಅವರಿಗೆ ಅವರಿಗೆ ಆಯುಷ್‌ ಮಖಿಜ ಮತ್ತು ವೆಂಕಟ್‌ ಗೌರವ್‌ ಪ್ರಸಾದ್ ಅವರಿಂದ ವಾಕ್ ಓವರ್ ಲಭಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.