ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್‌ ಟೂರ್ನಿ: ವಿದಿತ್‌ ಗುಜರಾತಿಗೆ ಗೆಲುವು ವಿಜ್ಕ್‌ ಆನ್‌ ಜಿ, ನೆದರ್ಲೆಂಡ್ಸ್: ಭಾರತದ ವಿದಿತ್‌ ಸಂತೋಷ್‌ ಗುಜರಾತಿ ಅವರು ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಮರಳಿದರು. ಆದರೆ ಆರ್‌. ಪ್ರಜ್ಞಾನಂದ ಮತ್ತೆ ನಿರಾಸೆ ಅನುಭವಿಸಿದರು. ಏಳನೇ ಸುತ್ತಿನಲ್ಲಿ ಎಡವಿದ್ದವಿದಿತ್ ಅವರು ಎಂಟನೇ ಸುತ್ತಿನ ಪಂದ್ಯದಲ್ಲಿ ಸ್ವೀಡನ್‌ನ ನಿಲ್ಸ್ ಗ್ರ್ಯಾಂಡೆಲಿಯಸ್‌ ಅವರನ್ನು ಮಣಿಸಿದರು. ಪ್ರಜ್ಞಾನಂದ ಅವರು ಅಜರ್‌ಬೈಜಾನ್‌ನ ಶಖರಿಯಾರ್‌ ಮಮೆದ್ಯಾರೊವ್ ಎದುರು ಸೋಲು ಅನುಭವಿಸಿದರು. ಎಂಟನೇ ಸುತ್ತಿನ ಬಳಿಕ ಶಖರಿಯಾರ್‌ ಅವರು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಇವರಿಬ್ಬರ ಬಳಿ ತಲಾ 5.5 ಪಾಯಿಂಟ್‌ಗಳಿವೆ. ವಿದಿತ್ ಮತ್ತು ನೆದರ್ಲೆಂಡ್ಸ್‌ನ ಅನೀಶ್ ಗಿರಿ (ತಲಾ 5 ಪಾಯಿಂಟ್ಸ್) ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ 13ನೇ ಸ್ಥಾನದಲ್ಲಿದ್ದಾರೆ. ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಎರಿಗೈಸಿ ಅವರು ಚಾಲೆಂಜರ್ಸ್‌ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸದ್ಯ ಅವರ ಬಳಿ ಏಳು ಪಾಯಿಂಟ್ಸ್‌ ಇವೆ. ಸೂರ್ಯ ಶೇಖರ್ ಗಂಗೂಲಿ ಈ ವಿಭಾಗದಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.