ವಿಶ್ವ ಗೇಮ್ಸ್ ವರ್ಷದ ಅಥ್ಲೀಟ್‌ ಶ್ರೀಜೇಶ್‌ ನವದೆಹಲಿ: ಭಾರತ ಹಾಕಿ ತಂಡದ ಅನುಭವಿ ಗೋಲ್‌ಕೀಪರ್ ಪಿ.ಆರ್‌. ಶ್ರೀಜೇಶ್ ಅವರಿಗೆ ಪ್ರತಿಷ್ಠಿತ ‘ವಿಶ್ವ ಗೇಮ್ಸ್ ವರ್ಷದ ಅಥ್ಲೀಟ್‌‘ ಗೌರವ ಸಂದಿದೆ.ಅವರು ಈ ಪುರಸ್ಕಾರ ಪಡೆದ ಭಾರತದ ಎರಡನೇ ಕ್ರೀಡಾಪಟು ಎನಿಸಿದ್ದಾರೆ. 2021ರಲ್ಲಿ ಶ್ರೀಜೇಶ್ ಅವರು ತೋರಿದ ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. 2020ರಲ್ಲಿ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಈ ಗೌರವಕ್ಕೆ ಭಾಜನರಾಗಿದ್ದರು. ಶ್ರೀಜೇಶ್ ಅವರು ಸ್ಪೇನ್‌ನ ಪರ್ವತಾರೋಹಿ ಅಲ್ಬರ್ಟೊ ಗಿನೆಸ್‌ ಲೋಪೇಜ್‌ ಮತ್ತು ಇಟಲಿಯ ವುಷು ಪ‍ಟುಮಿಚೆಲೆ ಜಿಯೊರ್ಡಾನೊ ಅವರನ್ನು ಹಿಂದಿಕ್ಕಿ ಈ ಪುರಸ್ಕಾರ ಗಳಿಸಿದ್ದಾರೆ. ಭಾರತ ಹಾಕಿ ತಂಡದ ಮಾಜಿ ನಾಯಕ ಮತ್ತು ಟೋಕಿಯೊ ಒಲಿಂಪಿಕ್ಸ್-ಕಂಚಿನ ಪದಕ ವಿಜೇತ ತಂಡದ ಭಾಗವಾಗಿರುವ ಶ್ರೀಜೇಶ್ 1,27,647 ಮತಗಳನ್ನು ಪಡೆದರೆ, ಲೋಪೇಜ್‌ ಮತ್ತು ಜಿಯೊರ್ಡಾನೊ ಕ್ರಮವಾಗಿ 67,428 ಮತ್ತು 52,046 ಮತಗಳನ್ನು ಗಳಿಸಿದರು. ಶ್ರೀಜೇಶ್‌ ಅವರು 2012ರ ಲಂಡನ್ ಒಲಿಂಪಿಕ್ಸ್ ಮತ್ತು ನಂತರ 2014ರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2014ರಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ, ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.