ಒಡಿಶಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮಿಥುನ್, ಮಾಳವಿಕಾ ಎಂಟರ ಘಟ್ಟಕ್ಕೆ ಉನಾಕಟಕ್: ಶ್ರೇಯಾಂಕರಹಿತ ಆಟಗಾರ ಮಿಥುನ್ ಮಂಜುನಾಥ್ ಇಲ್ಲಿ ನಡೆಯುತ್ತಿರುವ ಒಡಿಶಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಏಳನೇ ಶ್ರೇಯಾಂಕದ ಜೂನ್ ವೀ ಚೀಮ್ ಗೆ ಆಘಾತ ನೀಡಿದರು. ಇದರೊಂದಿಗೆ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಮಂಜುನಾಥ್ 21–11, 21–18ರಿಂದ ಮಲೇಷ್ಯಾದ ಚೀಮ್ ವಿರುದ್ಧ ಗೆದ್ದರು. 40 ನಿಮಿಷಗಳ ಹೋರಾಟದಲ್ಲಿ ಮಂಜುನಾಥ್ ಆಟವು ಕೌಶಲಪೂರ್ಣವಾಗಿತ್ತು. ಮುಂದಿನ ಪಂದ್ಯದಲ್ಲಿ ಪ್ರಿಯಾಂಶು ರಾಜವತ್ ಅವರನ್ನು ಮಂಜುನಾಥ್ ಎದುರಿಸುವರು. ಭಾರತದ ಶುಭಂಕರ್ ಡೇ ಬುಧವಾರ ಕೆನಡಾದ ಶಿಯಾದಾಂಗ್ ಶೇಂಗ್ ವಿರುದ್ಧ ಗೆದ್ದಿದ್ದರು. ಅವರು 21–16, 21–14ರಿಂದ ರಾಹುಲ್ ಯಾದವ್ ಚಿತ್ತಬೊಯ್ನಾ ವಿರುದ್ಧ ಗೆದ್ದು ಎಂಟರ ಘಟ್ಟಕ್ಕೆ ಪ್ರವೇಶಿಸಿದರು. ಕಿರಣ ಜಾರ್ಜ್ 21–12, 21–13ರಿಂದ ಚಿರಾಗ್ ಸೇನ್ ವಿರುದ್ಧ ಜಯಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು. ಮಾಳವಿಕಾ ಜಯಭೇರಿ ಅಮೋಘ ಲಯದಲ್ಲಿರುವ ಮಾಳವಿಕಾ ಬಂಸೋಡ್ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಅವರು ಪ್ರೀಕ್ವಾರ್ಟರ್ ಫೈನಲ್‌ನಲ್ಲಿ 21–13, 21–15ರಿಂದ 16 ವರ್ಷದ ತನ್ಸಿಮ್ ಮೀರ್ ವಿರುದ್ಧ ಜಯಿಸಿದರು. ತನ್ಸಿಮ್ ಅವರು ಜೂನಿಯರ್ ವಿಭಾಗದಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಟಗಾರ್ತಿಯಾಗಿದ್ದಾರೆ. 20 ವರ್ಷದ ಮಾಳವಿಕಾ ಈಚೆಗೆ ಸೈಯದ್ ಮೋದಿ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಪಿ.ವಿ. ಸಿಂಧು ಎದುರು ಸೋತಿದ್ದರು. ಈಚೆಗೆ ಇಂಡಿಯಾ ಓಪನ್ ಟೂರ್ನಿಯಲ್ಲಿ ಅವರು ತಮ್ಮ ನೆಚ್ಚಿನ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಸೋಲಿಸಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಭಾರತದ ಧ್ರುವ್ ರಾವತ್ ಮತ್ತು ಶಿಖಾ ಗೌತಮ್ 11–21, 14–21ರಿಂದ ಶ್ರೀಲಂಕಾದ ಸಚಿನ್ ದಿಯಾಸ್ ಮತ್ತು ತಿಲಿನಿ ಹೆಂದಾಹೆವಾ ವಿರುದ್ಧ ಎರಡನೇ ಸುತ್ತಿನಲ್ಲಿ ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.