ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ: ದಕ್ಷಿಣ ಆಫ್ರಿಕಾ ಮಣಿಸಿದ ಭಾರತ ಪೊಚೆಫ್‌ಸ್ಟ್ರೂಮ್, ದಕ್ಷಿಣ ಆಫ್ರಿಕಾ: ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಭಾರತ ಹಾಕಿ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಸುಲಭವಾಗಿ ಬಗ್ಗುಬಡಿಯಿತು. ಭಾನುವಾರ ನಡೆದ ಎಫ್‌ಐಎಚ್ ಪ್ರೊ ಲೀಗ್ ಟೂರ್ನಿಯ ಪಂದ್ಯದಲ್ಲಿ 10–2ರಿಂದ ಆತಿಥೇಯ ತಂಡವನ್ನು ಸೋಲಿಸಿತು. ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳ ಮಧ್ಯೆ ಜಿದ್ದಾಜಿದ್ದಿ ಪೈಪೋಟಿ ನಡೆದು 1–1ರಿಂದ ಸಮಬಲವಾಗಿತ್ತು. ಆದರೆ ಉಳಿದ ಮೂರೂ ಕ್ವಾರ್ಟರ್‌ಗಳಲ್ಲಿ ಭಾರತಒಂಬತ್ತು ಗೋಲುಗಳನ್ನು ದಾಖಲಿಸಿ ಸಂಪೂರ್ಣ ಪಾರಮ್ಯ ಮೆರೆಯಿತು. ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು. ಹರ್ಮನ್‌ಪ್ರೀತ್‌ 36, 52 ಮತ್ತು 60ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಹೊಡೆದರು. ಶೀಲಾನಂದ ಲಾಕ್ರಾ (27 ಮತ್ತು 48ನೇ ನಿಮಿಷ), ಸುರೇಂದರ್ ಕುಮಾರ್ (15ನೇ ನಿ.), ಮನದೀಪ್ ಸಿಂಗ್‌ (28ನೇ ನಿ.), ಸುಮಿತ್‌ (45ನೇ ನಿ.) ಮತ್ತು ಶಂಷೇರ್ ಸಿಂಗ್‌ (56ನೇ ನಿ.) ತಂಡದ ಪರ ಮಿಂಚಿದರು. ದಕ್ಷಿಣ ಆಫ್ರಿಕಾ ತಂಡದ ಡೇನಿಯಲ್ ಬೆಲ್‌ (12ನೇ ನಿಮಿಷ) ಮತ್ತು ಕ್ಯಾನರ್ ಬೀಚಾಂಪ್‌ (53ನೇ ನಿ.) ಯಶಸ್ಸು ಸಾಧಿಸಿದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಮನ್‌ಪ್ರೀತ್ ಪಡೆ ನಾಲ್ಕು ಗೋಲು ಹೊಡೆಯಿತು. ಅದರಲ್ಲಿ ಎರಡು ಬಾರಿ ಹರ್ಮನ್‌ಪ್ರೀತ್ ಕೈಚಳಕ ತೋರಿದರು. ಲೀಗ್‌ನ ಮುಂದಿನ ಪಂದ್ಯವು ಭುವನೇಶ್ವರದಲ್ಲಿ ನಡೆಯಲಿದ್ದು, ಭಾರತ ತಂಡವು ಸ್ಪೇನ್ ತಂಡಕ್ಕೆ ಮುಖಾಮುಖಿಯಾಗಲಿದೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.