ಬ್ಯಾಡ್ಮಿಂಟನ್‌: ಕೊರಿಯಾಗೆ ಮಣಿದ ಭಾರತ ಷಾ ಆಲಂ, ಮಲೇಷ್ಯಾ: ಲಕ್ಷ್ಯ ಸೇನ್ ಅವರನ್ನೊಳಗೊಂಡ ಭಾರತ ಪುರುಷರ ಯುವ ತಂಡವು ಏಷ್ಯನ್ ಟೀಮ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಕೊರಿಯಾ ಎದುರು ನಿರಾಸೆ ಅನುಭವಿಸಿತು. ಮಂಗಳವಾರ ನಡೆದ ‘ಎ’ ಗುಂಪಿನ ಹಣಾಹಣಿಯಲ್ಲಿ ಭಾರತ 0–5ರಿಂದ ಎದುರಾಳಿಗೆ ಸೋತಿತು. ಮೊದಲ ಹಣಾಹಣಿಯಲ್ಲಿ, ಇಂಡಿಯಾ ಓಪನ್ ವಿಜೇತ ಲಕ್ಷ್ಯ ಸೇನ್ ಅವರು11-21, 19-21ರಿಂದ ಜಿಯೊನ್ ಹಿವೊಕ್ ಎದುರು ಎಡವಿದರು. ಡಬಲ್ಸ್‌ನಲ್ಲಿ ರವಿಕೃಷ್ಣ ಪಿ.ಎಸ್‌. ಮತ್ತು ಶಂಕರಪ್ರಸಾದ್ ಉದಯಕುಮಾರ್‌ ಜೋಡಿಯು8-21, 10-21ರಿಂದ ಹಿ ತೆ ಕಿಮ್ ಅವರಿಗೆ ಸೋತರು. ಸಿಂಗಲ್ಸ್ ವಿಭಾಗದಲ್ಲಿ ಕಿರಣ್ ಜಾರ್ಜ್‌ ಕೂಡ 18-21, 14-21ರಿಂದ ಜೊ ವಾನ್ ಕಿಮ್ ಎದುರು ಮುಗ್ಗರಿಸಿದರು. ಜಿದ್ದಾಜಿದ್ದಿ ಹೋರಾಟ ನಡೆಸಿದರೂ ಮಿಥುನ್ ಮಂಜುನಾಥ್‌16-21, 27-25, 14-21ರಿಂದ ಮಿನ್ ಸನ್‌ ಜಿಯೊಂಗ್ ಅವರಿಗೆ ಸೋತರು. ಡಬಲ್ಸ್‌ ವಿಭಾಗದ ಮತ್ತೊಂದು ಪಂದ್ಯದಲ್ಲಿಮಂಜಿತ್ ಸಿಂಗ್ ಖ್ವೈರಕ್ಪಮ್ –ಡಿಂಕು ಸಿಂಗ್ ಕೊಂತೌಜಮ್7-21, 15-21ರಿಂದ ಯಾಂಗ್ ಜಿನ್‌ ಮತ್ತು ನಾ ಸಂಗ್ ಸೆಯುಂಗ್ ಅವರಿಗೆ ಮಣಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.