ಸ್ಲಾಲೊಮ್‌: ರೇಸ್‌ ಕೊನೆಗೊಳಿಸಲು ಆರಿಫ್‌ ವಿಫಲ ಬೀಜಿಂಗ್‌: ಭಾರತದ ಆಲ್ಪೈನ್‌ ಸ್ಕೀಯಿಂಗ್ ಪಟು ಆರಿಫ್ ಖಾನ್‌ ಅವರಿಗೆ ಚಳಿಗಾಲದ ಒಲಿಂಪಿಕ್ಸ್‌ನ ಸ್ಲಾಲೋಮ್‌ ವಿಭಾಗದಲ್ಲಿ ರೇಸ್‌ ಕೊನೆಗೊಳಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಕ್ರೀಡಾಕೂಟದಲ್ಲಿ ದೇಶದ ಅಭಿಯಾನ ನಿರಾಶಾದಾಯಕವಾಗಿ ಅಂತ್ಯಗೊಂಡಿತು. ಜಮ್ಮು ಮತ್ತು ಕಾಶ್ಮೀರದ 31 ವರ್ಷದ ಆರಿಫ್‌, ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ದೇಶದ ಏಕೈಕ ಅಥ್ಲೀಟ್ ಆಗಿದ್ದರು. ಭಾನುವಾರ ಜೈಂಟ್‌ ಸ್ಲಾಲೋಮ್‌ನಲ್ಲಿ 45ನೇ ಸ್ಥಾನ ಪಡೆದಿದ್ದ ಅವರು ಬುಧವಾರ ರನ್‌ 1 ಪೂರ್ಣಗೊಳಿಸಲು ವಿಫಲರಾದರು. ಚಳಿಗಾಲದ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ್ದ ಖಾನ್, ರನ್ 1 ಅನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ, ಸ್ಲಾಲೋಮ್ ವಿಭಾಗದ ರನ್‌ 2ರಲ್ಲಿ ಸ್ಪರ್ಧಿಸುವುದಿಲ್ಲ. 88 ಸ್ಪರ್ಧಿಗಳ ಪೈಕಿ 52 ಮಂದಿ ಮಾತ್ರ ಸ್ಪ‍ರ್ಧೆ ಪೂರ್ಣಗೊಳಿಸಿ ಮುಂದಿನ ಹಂತದಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದರು. ಸ್ಪರ್ಧೆಯಲ್ಲಿ ಉತ್ತಮ ಆರಂಭ ಮಾಡಿದ್ದ ಆರಿಫ್‌, ಮೊದಲ ಹಂತವನ್ನು 14.40 ಸೆಕೆಂಡುಗಳಲ್ಲಿ ಕೊನೆಗೊಳಿಸಿದ್ದರು.34.24 ಸೆಕೆಂಡುಗಳಲ್ಲಿ ಎರಡನೇ ಹಂತ ಪೂರ್ಣಗೊಂಡಿತ್ತು. ಆದರೆ ಅಂತಿಮ ಹಂತ ಕೊನೆಗೊಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಸ್ಟ್ರಿಯಾದ ಜೊಹಾನ್ನಸ್‌ ಸ್ಟ್ರಾಲ್ಜ್‌ (ಒಟ್ಟು 53.92 ಸೆ) ರನ್‌ 1 ಅನ್ನು ಅತಿವೇಗವಾಗಿ ಕೊನೆಗೊಳಿಸಿದರು. ನಾರ್ವೆಯ ಜೋಡಿ ಹೆನ್ರಿಕ್‌ ಕ್ರಿಸ್ಟಾಫರ್ಸನ್‌ (53.94 ಸೆ.) ಮತ್ತು ಸೆಬಾಸ್ಟಿಯನ್‌ ಸಿಲೆವಾಗ್‌ (53.98 ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.