ಏಷ್ಯಾ ಬ್ಯಾಡ್ಮಿಂಟನ್ : ಮಲೇಷ್ಯಾಗೆ ಮಣಿದ ಭಾರತ ಮಹಿಳಾ ತಂಡ ಷಾ ಆಲಂ, ಮಲೇಷ್ಯಾ: ವೀರೋಚಿತ ಹೋರಾಟ ಭಾರತ ಮಹಿಳಾ ತಂಡವು ಏಷ್ಯಾ ಬ್ಯಾಡ್ಮಿಂಟನ್‌ ಟೀಮ್‌ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಬುಧವಾರ ಮಲೇಷ್ಯಾ ತಂಡದ ಎದುರು 2–3ರಿಂದ ಸೋಲನುಭವಿಸಿತು. ಅಸ್ಮಿತಾ ಚಲಿಹಾ ಮತ್ತು ತಾರಾ ಶಾ ಅವರು ಸಿಂಗಲ್ಸ್ ವಿಭಾಗಗಳಲ್ಲಿ ಅರ್ಹ ಜಯ ಸಂಪಾದಿಸಿದರು. ಆದರೆ ಇಬ್ಬರು ಅನನುಭವಿ ಡಬಲ್ಸ್ ಜೋಡಿಗಳು ನಿರಾಸೆ ಮೂಡಿಸಿದರು. ಈ ಸೋಲಿನೊಂದಿಗೆ ಟೂರ್ನಿಯ ನಾಕೌಟ್‌ ಹಂತ ತಲುಪುವ ಭಾರತದ ಆಸೆ ಕ್ಷೀಣಿಸಿತು. ಉತ್ತಮ ಲಯದಲ್ಲಿದ್ದ ಮಾಳವಿಕಾ ಬಂಸೋಡ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದರು. ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಆಕರ್ಷಿ ಕಶ್ಯಪ್‌16-21, 21-18, 16-21ರಿಂದ ಕಿಸೊನಾ ಸೆಲ್ವಾಡುರಾಯ್‌ ಎದುರು ಸೋತರು. ಡಬಲ್ಸ್‌ ಜೋಡಿ ಖುಷಿ ಗುಪ್ತಾ – ಮೆಹರೀನ್‌ ರಿಜಾ1-21 6-21ರಿಂದ ವಲೇರಿ ಸಿಯೊವ್‌ ಮತ್ತು ಪರ್ಲಿ ಟ್ಯಾನ್‌ ಅವರ ಎದುರು ಮುಗ್ಗರಿಸಿದರು. 29 ನಿಮಿಷಗಳ ಸಿಂಗಲ್ಸ್ ಹಣಾಹಣಿಯಲ್ಲಿ ಅಸ್ಮಿತಾ21-11 21-19ರಿಂದ ಸಿತಿ ನೂರ್‌ಸುಹೈನಿ ಎದುರು ಗೆದ್ದು ತಂಡದ ಜಯದ ಆಸೆ ಜೀವಂತವಾಗಿರಿಸಿದರು. ಆದರೆ ಡಬಲ್ಸ್‌ನಲ್ಲಿ ಅರುಲ್‌ ಬಾಲಾ ರಾಧಾಕೃಷ್ಣನ್‌– ನೀಲಾ ವೆಳ್ಳುವನ್‌ ಅವರು10-21 12-21ರಿಂದ ಆ್ಯನಾ ಚಿಂಗ್ ಯಿಕ್‌ ಚೊಂಗ್‌– ತೊ ಮೇ ಕ್ಸಿಂಗ್ ಎದುರು ಸೋಲುವುದರೊಂದಿಗೆ ಮಲೇಷ್ಯಾಗೆ 3–1ರ ಮುನ್ನಡೆ ಸಿಕ್ಕಿತು. ಕೊನೆಯಲ್ಲಿ ತಾರಾ21-16, 21-15ರಿಂದ ಮಿಶಾ ಮೊಹಮ್ಮದ್‌ ಖೈರುಲ್ ಎದುರು ಜಯಿಸಿ ಹಿನ್ನಡೆಯನ್ನು 2–3ಕ್ಕೆ ತಗ್ಗಿಸಿದರು. ಮುಂದಿನ ಪಂದ್ಯದಲ್ಲಿ ಭಾರತದ ಮಹಿಳೆಯರು ಜಪಾನ್ ಸವಾಲು ಎದುರಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.