ಮುಂದಿನ ನಡೆ ಪೈಲ್ವಾನರ ಚಿಂತನೆ ನವದೆಹಲಿ: ಸುಪ್ರೀಂ ಕೋರ್ಟ್‌ ತಮ್ಮ ಅರ್ಜಿಯ ವಿಚಾರಣೆಯನ್ನು ಮುಕ್ತಾಯಗೊಳಿಸಿದ ಬೆನ್ನಲ್ಲೇ ಮುಂದಿನ ನಡೆಯ ಬಗ್ಗೆ ಪ್ರತಿಭಟನಾನಿರತ ಕುಸ್ತಿಪಟುಗಳು ಯೋಚನೆಯಲ್ಲಿದ್ದಾರೆ. ಇನ್ನೊಂದೆಡೆ, ‘ವ್ಯವಸ್ಥೆಯ ಮೇಲೆ ನಂಬಿಕೆಯಿಡಿ, ವಿಚಾರಣೆಯಿಂದ ಎಲ್ಲವೂ ಸ್ಪಷ್ಟವಾಗಲಿದೆ’ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕುಸ್ತಿಪಟುಗಳಿಗೆ ಮನವಿ ಮಾಡಿದ್ದಾರೆ. ಇನ್ನಷ್ಟು ಪೈಲ್ವಾನರು ಪ್ರತಿಭಟನಾ ಸ್ಥಳಕ್ಕೆ ಬರದಂತೆ ದೆಹಲಿ ಪೊಲೀಸರು ತಡೆಹಾಕಿದ್ದಾರೆ. ಧರಣಿನಿರತರಿಗೆ ಬೆಂಬಲ ಸೂಚಿಸಲು ಕೆಲವು ರೈತರಷ್ಟೇ ಪ್ರತಿಭಟನಾ ಸ್ಥಳ ಜಂತರ್‌ಮಂಥರ್‌ ತಲುಪಿದ್ದಾರೆ. ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳದಲ್ಲಿ ಶುಕ್ರವಾರ ಎಂದಿನ ಚಟುವಟಿಕೆ, ಲವಲವಿಕೆ ಕಾಣಲಿಲ್ಲ. ಕೆಲವು ರಾಜಕೀಯ ಮತ್ತು ರೈತನಾಯಕರು ಕುಸ್ತಿಪಟುಗಳನ್ನು ಭೇಟಿಯಾದರು. ‘ನಮ್ಮ ಕಾನೂನು ತಂಡ ಮತ್ತು ಮಾರ್ಗದರ್ಶಕರು ಮುಂದಿನ ನಡೆಯ ಬಗ್ಗೆ ಚರ್ಚೆಯಲ್ಲಿದ್ದಾರೆ. ಅಂತಿಮಗೊಂಡ ಮೇಲೆ ವಿವರ ನೀಡುತ್ತೇವೆ’ ಎಂದು ಒಲಿಂಪಿಕ್‌ ಪದಕ ವಿಜೇತ ಬಜರಂಗ್ ಪೂನಿಯಾ ಸುದ್ದಿಸಂಸ್ಥೆಗೆ ತಿಳಿಸಿದರು. ಅರ್ಜಿಯಲ್ಲಿ ಮನವಿ ಮಾಡಿರುವಂತೆ ಎಫ್‌ಐಆರ್‌ ದಾಖಲಿಸಲಾಗಿದೆ ಮತ್ತು ಸಂತ್ರಸ್ತ ಏಳು ಮಂದಿ ಮಹಿಳಾ ಕುಸ್ತಿಪಟುಗಳಿಗೆ ಸೂಕ್ತ ರಕ್ಷಣೆ ನೀಡಿರುವ ಕಾರಣ ಮುಂದಿನ ವಿಚಾರಣೆಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಅರ್ಜಿ ವಿಲೇ ಮಾಡಿತ್ತು. ದೆಹಲಿ ಪೊಲೀಸರು ಬ್ರಿಜ್‌ಭೂಷಣ್ ವಿರುದ್ಧ ಪೊಸ್ಕೊ ಕಾಯಿದೆಯಡಿ ಒಂದು ಸೇರಿದಂತೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಐವರು ಕುಸ್ತಿಪಟುಗಳ ಹೇಳಿಕೆ ಪಡೆದಿದ್ದಾರೆ. ಸಚಿವರ ಮನವಿ (ಲಖನೌ ವರದಿ): ‘ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿದೆ. ಇನ್ನಾದರೂ ನಿಷ್ಪಕ್ಷಪಾತ ತನಿಖೆ ನಡೆಸಲು ಪೊಲೀಸರಿಗೆ ಅನುವು ಮಾಡಿಕೊಡಿ ಎಂದು ಪ್ರತಿಭಟನಾನಿರತ ಕ್ರೀಡಾಪಟುಗಳಿಗೆ ಮನವಿ ಮಾಡುತ್ತೇನೆ’ ಎಂದು ಸಚಿವ ಅನುರಾಗ್‌ ಠಾಕೂರ್ ಹೇಳಿದ್ದಾರೆ. ಪೊಲೀಸ್‌ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಠಾಕೂರ್‌ ಅವರು ಖೇಲೊ ಇಂಡಿಯಾ ಕಾರ್ಯಕ್ರಮಕ್ಕೆ ಲಖನೌಗೆ ಬಂದಿದ್ದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.