ಚಳಿಗಾಲದ ಒಲಿಂಪಿಕ್ಸ್: ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ತಕಾಗಿ ಮಿಂಚು ಬೀಜಿಂಗ್‌: ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ಮಿನುಗಿದ ಜಪಾನ್‌ನ ಮಿಹೊ ತಕಾಗಿ ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಇದರೊಂದಿಗೆ ಒಲಿಂಪಿಕ್ಸ್ ದಾಖಲೆಯನ್ನೂ ನಿರ್ಮಿಸಿದರು. ಮಹಿಳೆಯರ 1,000 ಮೀಟರ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಗುರುವಾರ ಎದುರಾಳಿಯನ್ನು ಅರ್ಧ ಸೆಕೆಂಡುಗಳಲ್ಲಿ ಹಿಂದಿಕ್ಕಿ ಅಗ್ರಸ್ಥಾನ ಗಳಿಸಿದರು. ಈ ಚಿನ್ನ ಅಲ್ಲದೆ ಈಗಾಗಲೇ ಮೂರು ಪದಕಗಳು ಅವರ ಮುಡಿ ಸೇರಿವೆ. ತಕಾಗಿ ಅವರು 1 ನಿಮಿಷ 13.19 ಸೆಕೆಂಡುಗಳಲ್ಲಿ ಗುರಿ ತಲುಪಿದರೆ, ಬೆಳ್ಳಿ ಗೆದ್ದ ನೆದರ್ಲೆಂಡ್ಸ್‌ನ ಲೀರ್ದಾಮ್ ಜುಟ್ಟಾ 1 ನಿಮಿಷ 13.83 ಸೆಕೆಂಡುಗಳಲ್ಲಿ ರೇಸ್‌ ಪೂರ್ಣಗೊಳಿಸಿದರು. ಅಮೆರಿಕದ ಬೊವೆ ಬ್ರಿಟಾನಿ (1:14.61) ಅವರಿಗೆ ಕಂಚಿನ ಪದಕ ಒಲಿಯಿತು. ಬೀಜಿಂಗ್‌ನಲ್ಲಿ 1,500 ಮೀಟರ್ಸ್ ಮತ್ತು 500 ಮೀಟರ್ಸ್ ವೈಯಕ್ತಿಕ ವಿಭಾಗದಲ್ಲಿ ಈಗಾಗಲೇ ಅವರು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. ತಂಡ ವಿಭಾಗದಲ್ಲಿ ಒಂದು ಚಿನ್ನದ ಪದಕ ಅವರಿಗೆ ಒಲಿದಿತ್ತು. ‘ಪದಕ ನೀಡದಿರುವುದು ಅನ್ಯಾಯ’: ಫಿಗರ್ ಸ್ಕೇಟಿಂಗ್‌ ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದ ಅಮೆರಿಕದ ಸ್ಕೇಟರ್‌ಗಳಿಗೆ ಪದಕ ನೀಡದಿರುವುದು ‘ಕ್ರೀಡಾಪಟುಗಳಿಗೆ ಮಾಡಿದ ಅನ್ಯಾಯ‘ ಎಂದು ಆ ದೇಶದ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಯ ಮುಖ್ಯಸ್ಥರು ಕಿಡಿಕಾರಿದ್ದಾರೆ. ಕಳೆದ ವಾರ ರಷ್ಯಾದ ಮಹಿಳಾ ತಂಡವು ಚಿನ್ನದ ಪದಕ ಗೆದ್ದಿತ್ತು. ಆ ತಂಡದಲ್ಲಿದ್ದ 15 ವರ್ಷದ ಕ್ಯಾಮಿಲಾ ವಲೀವಾ ಅವರು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿದ್ದರಿಂದ ಸ್ಪರ್ಧೆಯಲ್ಲಿದ್ದ ಯಾರಿಗೂ ಪದಕ ನೀಡದಿರಲು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ನಿರ್ಧರಿಸಿತ್ತು. ಬದಲಾಗಿ ಅವರಿಗೆ ಒಲಿಂಪಿಕ್‌ ಜ್ಯೋತಿಯನ್ನು ಸ್ಮರಣಿಕೆಯಾಗಿ ನೀಡಲಾಗಿತ್ತು. ‘ನಮ್ಮ ತಂಡದವರು ತಮ್ಮ ಕೈಯಲ್ಲಿ ಪದಕಗಳೊಂದಿಗೆ ಮನೆಗೆ ಹೋಗಲು ಬಯಸುತ್ತಾರೆ‘ ಎಂದುಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಯ ಮುಖ್ಯಸ್ಥೆ ಸಾರಾ ಹಿರ್ಶ್‌ಲ್ಯಾಂಡ್ ಗುರುವಾರ ಬೀಜಿಂಗ್‌ನಿಂದ ವೀಡಿಯೊ ಸಂದರ್ಶನದಲ್ಲಿ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.