ಪದಕ ವಾಪಸ್: ಕೋಚ್ ಮಹಾವೀರ ಸಿಂಗ್‌ ಎಚ್ಚರಿಕೆ ಚಂಡೀಗಢ: ಜಂತರ್‌ ಮಂಥರ್‌ನಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿರುವ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್‌ ಮಹಾವೀರ್ ಸಿಂಗ್ ಫೋಗಟ್‌ ಅವರು ಧರಣಿ ಕುಳಿತವರಿಗೆ ನ್ಯಾಯ ಒದಗಿಸದಿದ್ದಲ್ಲಿ ಪದಕಗಳನ್ನು ವಾಪಸು ಮಾಡುವುದಾಗಿ ಶುಕ್ರವಾರ ಬೆದರಿಕೆ ಒಡ್ಡಿದ್ದಾರೆ. ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಕುಸ್ತಿಪಟುಗಳು ಅವರ ಬಂಧನಕ್ಕೆ ಒತ್ತಾಯಿಸಿ ಏಪ್ರಿಲ್ 23 ರಿಂದ ಜಂತರ್‌ ಮಂಥರ್‌ನಲ್ಲಿ ಧರಣಿ ಕುಳಿತಿದ್ದಾರೆ. ‘ಈ ರೀತಿಯ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಬಂಧಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮಹಾವೀರ್‌ ಸಿಂಗ್‌ ಆಗ್ರಹಿಸಿದರು. ‘ನೊಂದ ಕುಸ್ತಿಪಟುಗಳಿಗೆ ನ್ಯಾಯ ಒದಗಿಸದಿದ್ದಲ್ಲಿ ನನ್ನ ಪದಕಗಳನ್ನು ವಾಪಸು ಮಾಡುವೆ’ ಎಂದು ಅವರು ಹೇಳಿದರು. ವಿನೇಶಾ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರು ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಪ್ರಶಸ್ತಿ, ಪದಕಗಳನ್ನು ಹಿಂತಿರುಗಿಸುವುದಾಗಿ ಗುರುವಾರ ಬೆದರಿಕೆಯೊಡ್ಡಿದ್ದರು. ಇದೇ ವೇಳೆ ಹರಿಯಾಣದ ಹಲವು ‘ಖಾಪ್‌’ಗಳು (ಸಮುದಾಯದ ಹಿರಿಯರ ಪಂಚಾಯ್ತಿ) ಕುಸ್ತಿಪಟುಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿವೆ. ಗುರುವಾರ, ಹಿಸಾರ್‌, ಭಿವಾನಿ, ಜಿಂದ್ ಮತ್ತು ರೋಹ್ತಕ್‌ಗಳಲ್ಲಿ ಖಾಪ್‌ಗಳು ಪ್ರತಿಭಟನೆ ನಡೆಸಿ, ಕುಸ್ತಿಪಟುಗಳಿಗೆ ಧೈರ್ಯ ತುಂಬಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.