ಮಹಿಳೆಯರ ಹಾಕಿ ವಿಶ್ವಕಪ್‌: ಬಿ ಗುಂಪಿನಲ್ಲಿ ಭಾರತ ಭುವನೇಶ್ವರ: ಎಫ್‌ಐಎಚ್‌ ಮಹಿಳೆಯರ ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಗುಂಪಿನಲ್ಲಿ ಇಂಗ್ಲೆಂಡ್‌, ನ್ಯೂಜಿಲೆಂಡ್ ಮತ್ತು ಚೀನಾ ತಂಡಗಳು ಇವೆ ಎಂದು ಭಾರತ ಹಾಕಿ ಫೆಡರೇಷನ್ ಗುರುವಾರ ತಿಳಿಸಿದೆ. ಜುಲೈ ಒಂದರಿಂದ ಸ್ಪೇನ್ ಮತ್ತು ನೆದರ್ಲೆಂಡ್ಸ್‌ನಲ್ಲಿ ಟೂರ್ನಿ ನಡೆಯಲಿದ್ದು ಮಸ್ಕತ್‌ನಲ್ಲಿ ಈಚೆಗೆ ನಡೆದ ಏಷ್ಯಾಕಪ್‌ನಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಭಾರತ ತಂಡ ವಿಶ್ವಕಪ್‌ಗೆ ಅರ್ಹತೆ ಗಳಿಸಿತ್ತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂಡ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಅತಿಥೇಯ ನೆದರ್ಲೆಂಡ್ಸ್ ‘ಎ’ ಗುಂಪಿನಲ್ಲಿದ್ದು ಜರ್ಮನಿ, ಐರ್ಲೆಂಡ್ ಮತ್ತು ಚಿಲಿ ಈ ಗುಂಪಿನಲ್ಲಿವೆ. ‘ಸಿ’ ಗುಂಪಿನಲ್ಲಿ ಮತ್ತೊಂದು ಆತಿಥೇಯ ತಂಡ ಸ್ಪೇನ್‌ ಇದ್ದು ಅರ್ಜೆಂಟೀನಾ, ಕೊರಿಯಾ ಮತ್ತು ಕೆನಡಾವನ್ನು ಎದುರಿಸಲಿದೆ. ‘ಡಿ’ ಗುಂಪಿನಲ್ಲಿ ಆಸ್ಟ್ರೇಲಿಯಾ, ಬೆಲ್ಜಿಯಂ, ಜಪಾನ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.