ಸ್ಟ್ರಾಂಡ್‌ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಿ: ಎಂಟರಘಟ್ಟಕ್ಕೆ ನೀತು, ಅನಾಮಿಕಾ ನವದೆಹಲಿ: ಅಮೋಘ ಸಾಮರ್ಥ್ಯ ತೋರಿದ ಭಾರತದ ಮಹಿಳಾ ಬಾಕ್ಸರ್‌ಗಳಾದ ನೀತು ಮತ್ತು ಅನಾಮಿಕಾ ಅವರು ಸ್ಟ್ರಾಂಡ್‌ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಿಯಲ್ಲಿ ಸೋಮವಾರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಟೂರ್ನಿಯ 48 ಕೆಜಿ ವಿಭಾಗದ ಮೊದಲ ಸುತ್ತಿನ ಸೆಣಸಾಟದಲ್ಲಿ ನೀತು 5–0ಯಿಂದ ರಷ್ಯಾದ ಚುಮಗಾಲಕೊವಾ ಐಲಿಯಾ ಸವಾಲು ಮೀರಿದರೆ, ಅನಾಮಿಕಾ (50 ಕೆಜಿ ವಿಭಾಗ) ಅವರು 4–1ರಿಂದ ಸ್ಥಳೀಯ ಬಾಕ್ಸರ್‌ ಚುಕನೊವಾ ಜ್ಲಾಟಿಸ್ಲಾವಾ ಅವರನ್ನು ಮಣಿಸಿದರು. ಮುಂದಿನ ಬೌಟ್‌ಗಳಲ್ಲಿ ನೀತು ಮತ್ತು ಅನಾಮಿಕಾ ಅವರು ಕ್ರಮವಾಗಿ ಇಟಲಿಯ ರಾಬರ್ಟಾ ಬೊನಾಟ್ಟಿ ಮತ್ತು ಅಲ್ಜೀರಿಯಾದ ರೌಮಾಸ್ಯಾ ಬೌಲೆಮ್‌ ಅವರನ್ನು ಎದುರಿಸಲಿದ್ದಾರೆ. 54 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಶಿಕ್ಷಾ ಹಾಗೂ ಆಕಾಶ್‌ (ಪುರುಷರ 67 ಕೆಜಿ ವಿಭಾಗ) ಮೊದಲ ಸುತ್ತಿನ ಬೌಟ್‌ಗಳಲ್ಲಿ ನಿರಾಸೆ ಅನುಭವಿಸಿದರು. ಶಿಕ್ಷಾ ಅವರು ಮಾಜಿ ವಿಶ್ವ ಚಾಂಪಿಯನ್‌ ಹಾಗೂ ಹಾಲಿ ಏಷ್ಯನ್ ಚಿನ್ನದ ಪದಕ ವಿಜೇತೆ, ಕಜಕಸ್ತಾನದ ದಿನಾ ಜೊಲಾಮನ್ ಎದುರು 0–5ರಿಂದ ಸೋತರು. ಇಷ್ಟೇ ಅಂತರದಿಂದ ಆಕಾಶ್‌ ಜರ್ಮನಿಯ ಡೇನಿಯಲ್ ಕ್ರೊಟರ್‌ ಎದುರು ಎಡವಿದರು. ಕಳೆದ ಆವೃತ್ತಿಯಲ್ಲಿ ದೀಪಕ್ ಕುಮಾರ್ ಹಾಗೂ ನವೀನ್ ಬೂರಾ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.