ಪರೀಕ್ಷಾ ಕಣಕ್ಕೆ ನೂತನ ಎಫ್‌1 ರೇಸ್ ಕಾರು ಬಾರ್ಸಿಲೋನಾ (ಎಪಿ): ಬುಧವಾರ ಇಲ್ಲಿ ಆರಂಭವಾಗಲಿರುವ ಫಾರ್ಮುಲಾ ಒನ್ ರೇಸ್‌ ಟೆಸ್ಟ್ ಸೆಷನ್‌ನಲ್ಲಿ ನವಪೀಳಿಗೆಯ ಅತ್ಯಾಧುನಿಕ ಕಾರುಗಳು ಕಣಕ್ಕಿಳಿಯಲಿವೆ. ಇದೇ ಸಂದರ್ಭದಲ್ಲಿನೂತನ ನಿಯಮಾವಳಿಯನ್ನೂ ಪರಿಚಯಿಸಲಾಗುತ್ತಿದೆ. ಈ ಪರೀಕ್ಷಾ ಟ್ರಯಲ್ಸ್‌ನಲ್ಲಿ ಭಾಗವಹಿಸುವವರಿಗೆ 2022ರ ಅವಧಿಯಿಂದ ಆಗುವ ಬದಲಾವಣೆಗಳ ನೈಜ ಪರಿಚಯವಾಗಲಿದೆ. ರೇಸಿಂಗ್‌ನ ಎಲ್ಲ ವಿಭಾಗಗಳಲ್ಲಿ ಅಮೂಲಾಗ್ರ ಸುಧಾರಣೆಗಳನ್ನು ಮಾಡಲು ಹೊಸ ನಿಯಮಗಳು ನೆರವಾಗಲಿವೆ. ನೂತನ ಏರೊಡೈನಾಮಿಕ್ ಮತ್ತು ಟೈರ್‌ ಅಳವಡಿಕೆ ತಂತ್ರಜ್ಞಾನದಲ್ಲಿ ಬದಲಾವಣೆಗೊಂಡಿರುವ ಹೊಸ ಕಾರು ಟ್ರ್ಯಾಕ್‌ನಲ್ಲಿ ಗಮನ ಸೆಳೆಯಲಿವೆ. ಹೋದ ಬಾರಿಗಿಂತ ಈ ಸಲದ ಕಾರುಗಳು ವಿಶೇಷವಾಗಿವೆ. ಹಿಂಭಾಗ ಮತ್ತು ಮುಂಭಾಗದ ರೆಕ್ಕೆಗಳು, ದೊಡ್ಡಗಾತ್ರದ ಗಾಲಿಗಳು, ಚಾಲಕರಿಗೆ ಟ್ರ್ಯಾಕ್‌ನ ಸ್ಪಷ್ಟವಾದ ಚಿತ್ರಣ ಸಿಗುವಂತಹ ಹೊರಭಾಗವನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಓವರ್‌ಟೇಕ್‌ಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. 2014ರಲ್ಲಿ ಟರ್ಬೊ–ಹೈಬ್ರಿಡ್ ಯುಗ ಆರಂಭವಾದಾಗ ದೊಡ್ಡಮಟ್ಟದ ಬದಲಾವಣೆಗಳನ್ನು ಎಫ್‌1 ಮಾಡಿತ್ತು. 2017ರಲ್ಲಿ ವಿನ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಿತ್ತು. ‘ಕ್ರೀಡೆಯ ಆಕರ್ಷಣೆಯನ್ನು ದುಪ್ಪಟ್ಟು ಮಾಡುವುದು ನಮ್ಮ ಉದ್ಧೇಶ. ಅಲ್ಲದೇ ಎಲ್ಲ ತಂಡಗಳಿಗೂ ಕೈಗೆಟುಕುವಂತೆ ವಿನ್ಯಾಸಗೊಳಿಸುವುದು ಕೂಡ ಉದ್ದೇಶ’ ಎಂದು ಎಫ್‌1 ಮೋಟರ್‌ಸ್ಪೋರ್ಟ್ಸ್ ಮುಖ್ಯಸ್ಥ ರಾಸ್ ಬ್ರಾನ್ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.