ರ‍್ಯಾಪಿಡ್‌ ಚೆಸ್‌ ಟೂರ್ನಿ: ಮತ್ತೆ ಮಿಂಚಿದ ಪ್ರಜ್ಞಾನಂದ ಚೆನ್ನೈ: ವಿಶ್ವ ಚಾಂಪಿಯನ್ ಮ್ಯಾಗ್ನಸ್‌ ಕಾರ್ಲ್‌ಸನ್ ಅವರನ್ನು ಮಣಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಭಾರತದ ಯುವ ಪ್ರತಿಭೆ ಆರ್. ಪ್ರಜ್ಞಾನಂದ ಅವರು ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್‌ ರ‍್ಯಾಪಿಡ್‌ ಚೆಸ್‌ ಟೂರ್ನಿಯಲ್ಲಿ ಮತ್ತೆರಡು ಜಯ ಸಂಪಾದಿಸಿದ್ದಾರೆ. 16 ವರ್ಷದ ಪ್ರಜ್ಞಾನಂದ ಅವರು ಮಂಗಳವಾರ 10 ಮತ್ತು 12ನೇ ಸುತ್ತುಗಳಲ್ಲಿ ರಷ್ಯಾದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆ್ಯಂಡ್ರೆ ಎಸಿಪೆಂಕೊ ಮತ್ತು ಅಲೆಕ್ಸಾಂಡ್ರಾ ಕೊಸ್ತೆನ್ಯೂಕ್ ಅವರನ್ನು ಪರಾಭವಗೊಳಿಸಿದರು. ಬುಧವಾರ ನಾರ್ವೆಯ ಮ್ಯಾಗ್ನಸ್ ಅವರನ್ನು ಪ್ರಜ್ಞಾನಂದ ಸೋಲಿಸಿದ್ದರು. ಪ್ರಜ್ಞಾನಂದ ಮಂಗಳವಾರ ಒಂಬತ್ತನೇ ಸುತ್ತಿನಲ್ಲಿ ಉಜ್ಬೆಕಿಸ್ತಾನದ ನಾದಿರ್‌ಬೆಕ್‌ ಅಬ್ದುಸತರೊವ್ ಎದುರು ಡ್ರಾ ಸಾಧಿಸಿದರೆ, 11ನೇ ಸುತ್ತಿನಲ್ಲಿ ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಎದುರು ಸೋಲು ಕಂಡರು. ಸದ್ಯ ಪ್ರಜ್ಞಾನಂದ ಅವರು 15 ಪಾಯಿಂಟ್ಸ್‌ನೊಂದಿಗೆ 12ನೇ ಸ್ಥಾನದಲ್ಲಿದ್ದಾರೆ. ಎಸಿಪೆಂಕೊ ಎದುರು ಭಾರತದ ಆಟಗಾರನಿಗೆ 42 ನಡೆಗಳಲ್ಲಿ ಗೆಲುವು ಒಲಿಯಿತು. 63 ನಡೆಗಳಲ್ಲಿ ಮಾಜಿ ವಿಶ್ವ ಮಹಿಳಾ ಚಾಂಪಿಯನ್‌ಅಲೆಕ್ಸಾಂಡ್ರಾ ಕೊಸ್ತೆನ್ಯೂಕ್ ಅವರನ್ನು ಮಣಿಸಿದರು. ಪ್ರಜ್ಞಾನಂದ ಅವರು 13, 14 ಮತ್ತು8 15ನೇ ಸುತ್ತುಗಳಲ್ಲಿ ಕ್ರಮವಾಗಿ ಜರ್ಮನಿಯ ವಿನ್ಸೆಂಟ್‌ ಕೇಮರ್‌, ಅಮೆರಿಕದ ಹ್ಯಾನ್ಸ್ ಮೋಕ್ ನೀಮನ್ ಮತ್ತು ರಷ್ಯಾದ ವ್ಲಾಡಿಸ್ಲಾವ್‌ ಅರ್ಟ್‌ಮೆವ್‌ ಅವರನ್ನು ಎದುರಿಸಲಿದ್ದಾರೆ. ಸದ್ಯ ನೆಪ್ನೊಮಿಯಾಚಿ (27) ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ ಎದುರಿನ ಸೋಲಿನ ಬಳಿಕ ಪುಟಿದೆದ್ದಿರುವ ಕಾರ್ಲ್‌ಸನ್‌ (20), ಕುವಾಂಗ್ ಲಿಯೆಮ್ ಲೀ ಮತ್ತು ಕ್ರಿಸ್ಟಾಫ್ ಡುಡಾ ಎದುರು ಗೆದ್ದು ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಇಷ್ಟೇ ಪಾಯಿಂಟ್ಸ್ ಕಲೆಹಾಕಿರುವ ಅರ್ಟಮೆವ್ ಹಾಗೂ ಕೇಮರ್‌ ಕೂಡ ನಾರ್ವೆ ಆಟಗಾರನೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.