ಚಳಿಗಾಲದ ಒಲಿಂಪಿಕ್ಸ್‌: ‘ಭಿನ್ನ’ ಸಾಮರ್ಥ್ಯದ ಲೆಡೆಕಗೆ ಮೂರನೇ ಚಿನ್ನ ಜಾಂಗ್‌ಜಿಯಾಕೊ: ಎರಡು ಬಾರಿ ಚಿನ್ನದ ಪದಕ ಗಳಿಸಿರುವ ಎಸ್ತರ್‌ ಲಡೇಕ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಮಂಗಳವಾರ ಮೂರನೇ ಚಿನ್ನ ಗೆದ್ದು ಸಂಭ್ರಮಿಸಿದರು. ಸ್ನೋಬೋರ್ಡ್‌ನ ಪ್ಯಾರಲಲ್ ಜೈಂಟ್ ಸ್ಲಲೋಮ್ ವಿಭಾಗದಲ್ಲಿ ಅಮೋಘ ಸಾಧನೆ ಮಾಡಿದ ಅವರು ಚಳಿಗಾಲದ ಒಲಿಂಪಿಕ್ಸ್‌ನ ವಿಭಿನ್ನ ಕ್ರೀಡೆಗಳಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಎನಿಸಿಕೊಂಡರು. ಜೆಕ್ ಗಣರಾಜ್ಯದವರಾದ 26 ವರ್ಷದ ಎಸ್ತರ್‌ ನಾಲ್ಕು ವರ್ಷಗಳ ಹಿಂದೆ ಪಿಯಾಂಗ್‌ಚಾಂಗ್‌ನಲ್ಲಿ ಸ್ನೋಬೋರ್ಡ್‌ ಸ್ಪರ್ಧೆಯಲ್ಲಿ ಚಿನ್ನ ಗಳಿಸಿದ್ದರು. ಆ ವರ್ಷ ಸ್ಕೀಯಿಂಗ್‌ನಲ್ಲೂ ಚಿನ್ನದ ಪಕದ ಅವರ ಕೊರಳನ್ನೇರಿತ್ತು. ಈ ಬಾರಿ ಚಾಂಪಿಯನ್‌ ಪಟ್ಟವನ್ನು ಉಳಿಸಿಕೊಂಡರು.‌ ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಎಸ್ತರ್‌ ಅವರಿಗೆ ಆಸ್ಟ್ರಿಯಾದ ಡ್ಯಾನಿಯೆಲಾ ಉಲ್‌ಬಿಂಗ್ ಅವರಿಂದ ಪ್ರಬಲ ಸ್ಪರ್ಧೆ ಎದುರಾಗಿತ್ತು. ಜೆಂಟಿಂಗ್ ಸ್ನೋ ಪಾರ್ಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಲೊವೇನಿಯಾದ ಗ್ಲೋರಿಯಾ ಕೊಟ್ನಿಕ್‌ ಕಂಚಿನ ಗೆದ್ದುಕೊಂಡರು. ಲೆಡೆಕಾ ಚಾಂಪಿಯನ್ ಆಗಿದ್ದರೂ ತಕ್ಷಣಕ್ಕೆ ಅವರಿಗೆ ಅದರ ಬಗ್ಗೆ ತಿಳಿದಿರಲಿಲ್ಲ. ‘ಪ್ರತಿ ಬಾರಿಯೂ ಉತ್ತಮ ಸಾಮರ್ಥ್ಯ ತೋರಲು ಪ್ರಯತ್ನಿಸುತ್ತಿದ್ದೆ. ಪ್ರತಿ ಓಟದ ನಂತರ ಮುಂದಿನ ಬಾರಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಮನಸ್ಸು ತುಡಿಯುತ್ತಿತ್ತು. ಇದರಿಂದಾಗಿ ಪದಕ ಗೆಲ್ಲಲು ಸಾಧ್ಯವಾಯಿತು’ ಎಂದು ಎಸ್ತರ್ ವಿವರಿಸಿದರು. ಈ ಬಾರಿಯೂ ಅವರು ಎರಡು ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಶುಕ್ರವಾರ ನಡೆಯಲಿರುವ ಮಹಿಳೆಯರ ಸೂಪರ್ ಜಿ ಸ್ಕೀಯಿಂಗ್‌ನಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಬೆಂಜಮಿನ್ ಕರ್ಲ್‌ಗೆ ಚಿನ್ನದ ಪದಕ ಪುರುಷರ ವಿಭಾಗದಲ್ಲಿ ಆಸ್ಟ್ರಿಯಾದ ಬೆಂಜಮಿನ್ ಕರ್ಲ್‌ ಚಿನ್ನದ ಪದಕ ಗೆದ್ದುಕೊಂಡರು. ಫೈನಲ್‌ನಲ್ಲಿ ಅವರು ಸ್ಲೊವೇನಿಯಾದ ಟಿಮ್ ಮಸ್ಟನಕ್‌ ಎದುರು ಜಯ ಸಾಧಿಸಿದರು. ಒಲಿಂಪಿಕ್ಸ್‌ನಲ್ಲಿ ಇದು ಅವರು ಗೆದ್ದ ಮೊದಲ ಚಿನ್ನ. 36 ವರ್ಷದ ಬೆಂಜಮಿನ್ 2010ರ ವ್ಯಾಂಕೊವರ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 2014ರ ಸೋಚಿ ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನ ಗೆದ್ದಿದ್ದ ರಷ್ಯಾದ ವಿಚ್‌ ವೈಲ್ಡ್‌ ಕಂದು ಗೆದ್ದುಕೊಂಡರು. ಮಹಿಳೆಯರ ಕ್ರಾಸ್ ಕಂಟ್ರಿ ಫ್ರೀಸ್ಟೈಲ್ ಸ್ಪ್ರಿಂಟ್‌ನಲ್ಲಿ ಸ್ವೀಡನ್‌ನ ಜೊನಾ ಸುಂಡ್ಲಿಂಗ್‌ ಚಿನ್ನ ಗಳಿಸಿದರು. ಸ್ವೀಡನ್‌ನ ಮಾಜ ಡಲ್ಗ್‌ವಿಸ್ಟ್ ಬೆಳ್ಳಿ ಮತ್ತು ಅಮೆರಿಕದ ಜೆಸಿ ಡಿಗಿನ್ಸ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.