ಬಿಬಿಸಿ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಸಿಂಧು, ಮೀರಾಬಾಯಿ ನಾಮನಿರ್ದೇಶನ ನವದೆಹಲಿ: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮತ್ತು ವೇಟ್‌ಲಿಫ್ಟಿಂಗ್ ಕ್ರೀಡಾಪಟು ಮೀರಾಬಾಯಿ ಚಾನು ಅವರನ್ನು ಬಿಸಿಸಿ ಭಾರತೀಯ ಮಹಿಳಾ ಕ್ರೀಡಾಪಟು ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಲಾಗಿದೆ. ಮಂಗಳವಾರ ಬಿಬಿಸಿ ಪ್ರಕಟಿಸಿರುವ ಪಟ್ಟಿಯಲ್ಲಿ ಭಾರತದ ಐವರು ಮಹಿಳಾ ಕ್ರೀಡಾಪಟುಗಳಿದ್ದಾರೆ. ಬೆಂಗಳೂರಿನ ಗಾಲ್ಫ್‌ ಪಟು ಅದಿತಿ ಅಶೋಕ್, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಶೂಟರ್ ಅವನಿ ಲೇಖರಾ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕವಿಜೇತ ಬಾಕ್ಸರ್‌ ಲವ್ಲಿನಾ ಬೊರ್ಗೊಹೈನ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಫೆಬ್ರುವರಿ 28ರವರೆಗೂ ಆನ್‌ಲೈನ್ ಮತದಾನ ನಡೆಯಲಿದೆ. ಅದರಲ್ಲಿ ಹೆಚ್ಚು ಮತಗಳನ್ನು ಪಡೆದವರು ಪ್ರಶಸ್ತಿಗೆ ಅರ್ಹರಾಗುವರು. ಮಾರ್ಚ್‌ 28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ‘ಇದು ನನಗೆ ಉತ್ತಮವಾದ ವರ್ಷವಾಗಿದೆ. ಉತ್ತಮವಾಗಿ ಆಡಿರುವ ಸಂತಸವೂ ನನಗಿದೆ. ಗಾಲ್ಫ್‌ ಕ್ರೀಡೆಯು ಜನಪ್ರಿಯವಾಗುತ್ತಿರುವುದು ಹೆಮ್ಮೆಯೆನಿಸುತ್ತಿದೆ‘ ಎಂದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಅದಿತಿ ಅಶೋಕ್ ಹೇಳಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದಿಗ್ಗಜ ಮಹಿಳಾ ಕ್ರೀಡಾಪಟುಗಳಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದೂ ತಿಳಿಸಲಾಗಿದೆ. ‘ಯಶಸ್ಸು ಸುಲಭವಾಗಿ ಒಲಿಯುವುದಿಲ್ಲ. ಕೆಲವು ತಿಂಗಳುಗಳ ಸತತ ಪರಿಶ್ರಮ, ಪ್ರತಿದಿನದ ಅಭ್ಯಾಸ, ಬದ್ಧತೆ ಇರಲೇಬೇಕು’ ಎಂದು ರಿಯೊ ಡಿ ಜನೈರೊ ಮತ್ತು ಟೋಕಿಯೊ ಒಲಿಂಪಿಕ್ಸ್‌ಗಳಲ್ಲಿ ಪದಕ ಜಯಿಸಿದ ಸಿಂಧು ಹೇಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.