ಪ್ರೊ ಕಬಡ್ಡಿ: ಪಟ್ನಾ, ಹರಿಯಾಣಕ್ಕೆ ಜಯ ಬೆಂಗಳೂರು: ಸಚಿನ್ ಅಮೋಘ ದಾಳಿಯ ಬಲದಿಂದ ಪಟ್ನಾ ಪೈರೆಟ್ಸ್‌ ತಂಡವು ಅಮೋಘ ಜಯ ಸಾಧಿಸಿತು. ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪಟ್ನಾ ತಂಡವು 47–38ರಿಂದ ಯು ಮುಂಬಾ ಎದುರಿಗೆ ಜಯಿಸಿತು. ಸಚಿನ್ 16 ಅಂಕಗಳನ್ನು ಗಳಿಸಿದ ಜಯದ ರೂವಾರಿಯಾದರು. ಗುಮಾನ್ ಸಿಂಗ್ ಕೂಡ 11 ಅಂಕಗಳನ್ನು ಗಳಿಸಿ ತಂಡದ ಜಯಕ್ಕೆ ಕಾಣಿಕೆ ನೀಡಿದರು. ಮುಂಬಾ ತಂಡದ ಆಭಿಷೇಕ್ ಸಿಂಗ್ 13 ಮತ್ತು ವಿ. ಅಜಿತ್ 11 ಅಂಕಗಳನ್ನು ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು 37–29ರಿಂದ ತಮಿಳ್ ತಲೈವಾಸ್ ವಿರುದ್ಧ ಜಯಿಸಿತು. ಹರಿಯಾಣ ತಂಡದ ಆಶಿಶ್ ಅಮೋಘ ದಾಳಿ ನಡೆಸಿ 16 ಪಾಯಿಂಟ್‌ಗಳಣ್ನು ತಮ್ಮ ಜೇಬಿಗೆ ಹಾಕಿಕೊಂಡರು. ಅವರಿಗೆ ನಾಯಕ ವಿಕಾಶ್ ಖಂಡೋಲಾ (8) ಉತ್ತಮ ಬೆಂಬಲ ನೀಡಿದರು. ತಲೈವಾಸ್ ತಂಡದ ಮಂಜೀತ್ (10) ಮತ್ತು ಅಜಿಂಕ್ಯ ಪವಾರ್ (8) ಉತ್ತಮವಾಗಿ ಆಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.