ನಾಲ್ಕು ವರ್ಷಗಳ ನಂತರ ದೀಪಿಕಾ ಸ್ಕ್ವಾಷ್ ಕಣಕ್ಕೆ ನವದೆಹಲಿ: ಸ್ಕ್ವಾಷ್‌ ತಾರೆ ದೀಪಿಕಾ ಪಳ್ಳಿಕಲ್ ನಾಲ್ಕು ವರ್ಷಗಳ ನಂತರ ಮತ್ತೆ ಕಣಕ್ಕಿಳಿಯಲಿದ್ದಾರೆ. ಕೌಟುಂಬಿಕ ಕಾರಣಕ್ಕಾಗಿ ಅವರು ಕ್ರೀಡೆಯಿಂದ ವಿಶ್ರಾಂತಿ ಪಡೆದಿದ್ದರು. ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ಪತ್ನಿ ದೀಪಿಕಾ ಹೋದ ವರ್ಷ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. 31 ವರ್ಷದ ದೀಪಿಕಾ ಈ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವತ್ತ ಚಿತ್ತ ನೆಟ್ಟಿದ್ದಾರೆ. ನಾಲ್ಕು ವರ್ಷ ಕ್ರೀಡೆಯಿಂದ ದೂರವುಳಿದಿದ್ದ ಸಂದರ್ಭದಲ್ಲಿ ದೀಪಿಕಾ ಅವರು ತಮ್ಮದೇ ಒಳಾಂಗಣ ವಿನ್ಯಾಸ ಸಂಸ್ಥೆಯನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು ಡಬಲ್ಸ್‌ ವಿಭಾಗದಲ್ಲಿ ಸ್ಪರ್ಧಿಸುವರು. ನಂತರ ಹಂತ ಹಂತವಾಗಿ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲಿದ್ದಾರೆ. ಏಷ್ಯನ್ ಕೂಟದ ಹೊತ್ತಿಗೆ ಸಿಂಗಲ್ಸ್‌ನಲ್ಲಿ ಆಡಲು ಸಿದ್ಧವಾಗುವ ನಿರೀಕ್ಷೆ ಇದೆ. ದೀಪಿಕಾ ಮತ್ತು ಜೋಷ್ನಾ ಚಿನಪ್ಪ ಅವರು 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ‘ಸಾಧನೆ ಮಾಡಲು ಪೂರಕ ವ್ಯವಸ್ಥೆಯು ಇರುವುದು ನನ್ನ ಅದೃಷ್ಟ. ಆದ್ದರಿಂದ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಇದೆ’ ಎಂದು ದೀಪಿಕಾ ಹೇಳಿದ್ದಾರೆ. ‘ಅವಳಿ ಮಕ್ಕಳನ್ನು ಸಲಹುವ ಕೆಲಸವು ತುಂಬ ಕಠಿಣವಾದದ್ದು. ತಾಯಿಯಾಗಿ ಮತ್ತು ವೃತ್ತಿಪರ ಕ್ರೀಡಾಪಟುವಾಗಿ ಜೀವನದಲ್ಲಿ ಸಮತೋಲನ ಸಾಧಿಸುವುದು ಬಹಳ ಸವಾಲಿನದ್ದು‘ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.