ಚಳಿಗಾಲದ ಒಲಿಂಪಿಕ್ಸ್: ತಂದೆಯ ಹಾದಿ ತುಳಿದ ಸ್ಟ್ರಾಲ್ಜ್‌ ಯಾನ್‌ಕಿಂಗ್‌: ಅಸ್ಟ್ರಿಯಾದ ಸ್ಕೀಯಿಂಗ್ ಪಟು ಜೋಹಾನ್ನಸ್‌ ಸ್ಟ್ರಾಲ್ಜ್‌ ಅವರು ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಅಸ್ಟ್ರಿಯಾಗೆ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟರು. ಇದರೊಂದಿಗೆ 34 ವರ್ಷಗಳ ಹಿಂದೆ ತಮ್ಮ ತಂದೆ ಮಾಡಿದ ಸಾಧನೆಯನ್ನು ಅನುಸರಿಸಿದರು. ಟ್ರಾಫಿಕ್ ಪೊಲೀಸ್‌ ಆಗಿ ಕಾರ್ಯನಿರ್ವಹಿಸಿದ್ದ ಸ್ಟ್ರಾಲ್ಜ್‌ ಒಂದು ಸಂದರ್ಭದಲ್ಲಿ ತಂಡದಿಂದ ಕೈಬಿಡಲಾಗಿತ್ತು. ಕಂಬೈನ್ಡ್‌ ಸ್ಕೀಯಿಂಗ್‌ ಸ್ಪರ್ಧೆಯ ಆರಂಭದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಸ್ಟ್ರಾಲ್ಜ್‌, ಎರಡು ನಿಮಿಷ 31.43 ಸೆಕೆಂಡುಗಳಲ್ಲಿ ಗುರಿ ಮುಟ್ಟಿವ ಮೂಲಕ ಸ್ಲಾಲೋಮ್ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು. 1988ರ ಕ್ಯಾಲ್ಗರಿ ಒಲಿಂಪಿಕ್ ಕೂಟದಲ್ಲಿಸ್ಟ್ರಾಲ್ಜ್‌ ಅವರ ತಂದೆ ಹುಬರ್ಟ್‌ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ನಾರ್ವೆಯ ಅಲೆಕ್ಸಾಂಡರ್‌ ಆಮೋಟ್‌ ಕಿಲ್ದೆ ಬೆಳ್ಳಿ ಮತ್ತು ಕೆನಡಾದ ಜೇಮ್ಸ್ ಕ್ರಾಫೊರ್ಡ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಮಾನಸಿಕ ಆರೋಗ್ಯ ಗೆದ್ದ ಕಿಮ್‌ಗೆ ಚಿನ್ನ: ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಎರಡು ವರ್ಷಗಳಿಂದ ಕ್ರೀಡೆಯಿಂದ ದೂರವಿದ್ದ ಅಮೆರಿಕದ ಮಹಿಳಾ ಸ್ನೋಬೋರ್ಡಿಂಗ್ ಪಟು ಕ್ಲೋ ಕಿಮ್‌ ಈ ಒಲಿಂಪಿಕ್ಸ್‌ನಲ್ಲಿ ಎರಡನೇ ಚಿನ್ನ ಜಯಿಸಿದರು. 2018ರ ಪೆಯೊಚಾಂಗ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಅವರು ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಅತಿ ಕಿರಿಯ ಮಹಿಳಾ ಅಥ್ಲೀಟ್ ಎನಿಸಿಕೊಂಡಿದ್ದರು. ಇದಾದ ಬಳಿಕ ಮಾನಸಿಕ ಆರೋಗ್ಯ ಹಾಗೂ ವಿದ್ಯಾಭ್ಯಾಸದ ಕಾರಣ ಅವರು ಕಣಕ್ಕಿಳಿದಿರಲಿಲ್ಲ. ಇಲ್ಲಿ ಹಾಫ್‌ಪೈಪ್‌ ವಿಭಾಗದಲ್ಲಿ ಅವರು ಅಗ್ರಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.