ಚಳಿಗಾಲದ ಒಲಿಂಪಿಕ್ಸ್: ಪದಕ ಗೆದ್ದ ಕಪ್ಪು ಜನಾಂಗದ ಮೊದಲ ಮಹಿಳೆ ಎರಿನ್‌ ಬೀಜಿಂಗ್‌: ಅಮೆರಿಕದ ಎರಿನ್ ಜಾಕ್ಸನ್‌ ಮಹಿಳೆಯರ 500 ಮೀಟರ್ಸ್‌ ಸ್ಪೀಡ್‌ ಸ್ಕೇಟಿಂಗ್ ವಿಭಾಗದ ಸ್ಪರ್ಧೆಯ ಮುಕ್ತಾಯದ ಗೆರೆ ದಾಟುತ್ತಿದ್ದಂತೆ ಚಾರಿತ್ರಿಕ ಸಾಧನೆಯೊಂದು ದಾಖಲಾಯಿತು. ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಪದಕದ ಸಾಧನೆ ಮಾಡಿದ ಕಪ್ಪು ಜನಾಂಗದ ಮೊದಲ ಮಹಿಳೆ ಎಂಬ ಶ್ರೇಯ ಅವರದಾಯಿತು. ರಾಷ್ಟ್ರೀಯ ಸ್ಪೀಡ್‌ ಸ್ಕೇಟಿಂಗ್‌ ಓವಲ್‌ನಲ್ಲಿ ನಡೆದ ಸ್ಪರ್ಧೆಯ ಆರಂಭದಿಂದಲೂ ಎರಿನ್‌ ಅಮೋಘ ಸಾಮರ್ಥ್ಯ ತೋರಿದರು. ಅಮೆರಿಕ ತಂಡಕ್ಕೆ ಈ ಒಲಿಂಪಿಕ್ಸ್‌ನ ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ಒಲಿದ ಮೊದಲ ಚಿನ್ನವೂ ಇದಾಗಿದೆ. ‘ಅಮೆರಿಕದಲ್ಲಿ ಹೆಚ್ಚಿನ ಅಲ್ಪಸಂಖ್ಯಾತರು ನನ್ನ ಸಾಧನೆಯಿಂದ ಸ್ಫೂರ್ತಿ ಪಡೆದು ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ ಅದು ಆಶಾದಾಯಕ ಬೆಳವಣಿಗೆಯಾಗಲಿದೆ‘ ಎಂದು ಜಾಕ್ಸನ್ ಹೇಳಿದರು. ಎರಿನ್ ಜಾಕ್ಸನ್‌ ಅವರು 37.04 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ, ಬೆಳ್ಳಿ ಗೆದ್ದ ಜಪಾನ್‌ನ ಮಿಹೊ ತಕಾಗಿ 37.12 ಸೆಕೆಂಡುಗಳಲ್ಲಿ ರೇಸ್‌ ಮುಗಿಸಿದರು. ಕಂಚಿನ ಪದಕವು ರಷ್ಯಾ ಒಲಿಂಪಿಕ್ಸ್ ಸಮಿತಿಯ ಎಂಜೆಲಿನಾ ಗೋಲಿಕೊವ (37.21 ಸೆಕೆಂಡು) ಅವರ ಪಾಲಾಯಿತು. ವೇಲಿವಾ ಸ್ಪರ್ಧೆಗೆ ಅನುಮತಿ: ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿರುವ ರಷ್ಯಾದ ಯುವ ಅಥ್ಲೀಟ್‌ ಸ್ಪರ್ಧೆಗೆ ಕ್ರೀಡಾ ನ್ಯಾಯಾಲಯ ಅನುಮತಿ ನೀಡಿದೆ. ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲವಾದ ಕಾರಣಕ್ಕೆ ಅವರನ್ನು ಅಮಾನತು ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಮಂಗಳವಾರ ಆರಂಭವಾಗುವ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ 15 ವರ್ಷದ ಅಥ್ಲೀಟ್‌ ಭಾಗವಹಿಸಬಹುದು ಎಂದು ಕೋರ್ಟ್ ತೀರ್ಪು ನೀಡಿದೆ. ಆದರೆ ಅವರು ಪ್ರಕರಣದಿಂದ ಮುಕ್ತರಾಗಿಲ್ಲ. ಮುಂದೆಯೂ ಶಿಕ್ಷೆ ಎದುರಿಸಬಹುದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.