ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಟೂರ್ನಿ: ಸ್ಪೇನ್‌ಗೆ ಮಣಿದ ಭಾರತ ತಂಡಗಳು ಭುವನೇಶ್ವರ: ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿದ್ದ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಎಫ್‌ಐಎಚ್‌ ಪ್ರೋ ಲೀಗ್ ಹಾಕಿ ಟೂರ್ನಿಯ ಎರಡನೇ ಹಣಾಹಣಿಯಲ್ಲಿ ಸ್ಪೇನ್ ಎದುರು ಎಡವಿದವು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್ ನಾಯಕತ್ವದ ಪುರುಷರ ತಂಡವು 3–5ರಿಂದ ಸ್ಪೇನ್‌ಗೆ ಮಣಿಯಿತು. ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಆರನೇ ನಿಮಿಷದಲ್ಲಿ ಅಭಿಷೇಕ್ ಮೂಲಕ ಗೋಲಿನ ಖಾತೆ ತೆರೆಯಿತು. ಆದರೆ ಪ್ರವಾಸಿ ತಂಡವು ಪಾವ್ ಕುನಿಲ್‌ (14, 24ನೇ ನಿಮಿಷ), ಜೊವಾನ್ ಟರೆಸ್‌ (14ನೇ ನಿ.) ತೋರಿದ ಕೈಚಳಕದ ನೆರವಿನಿಂದ ಮುನ್ನಡೆ ಸಾಧಿಸಿತು. ಬಳಿಕ ಪೆಪೆ ಕುನಿಲ್‌ (54ನೇ ನಿ.) ಮತ್ತು ಮಾರ್ಕ್ ಮಿರಾಲ್ಲೆಸ್‌ (59ನೇ ನಿ.) ತಂಡಕ್ಕೆ ಮತ್ತೆರಡು ಗೋಲು ತಂದರು. ಭಾರತದ ಪರ ಹರ್ಮನ್‌ ಪ್ರೀತ್ ಸಿಂಗ್‌ (27ನೇ ನಿ.) ಮತ್ತು ಸುಖಜೀತ್ ಸಿಂಗ್‌ (51ನೇ ನಿ.) ತಲಾ ಒಂದು ಗೋಲು ದಾಖಲಿಸಿದರು. ಭಾರತ ಶನಿವಾರ 5–4ರಿಂದ ಸ್ಪೇನ್‌ಗೆ ಸೋಲುಣಿಸಿತ್ತು. ಮಹಿಳೆಯರಿಗೂ ನಿರಾಸೆ: ಸವಿತಾ ಪೂನಿಯಾ ನೇತೃತ್ವದ ಭಾರತ ಮಹಿಳಾ ತಂಡವೂ ಸ್ಪೇನ್ ಎದುರು ಭಾನುವಾರ 3-4ರಿಂದ ಸ್ಪೇನ್ ತಂಡಕ್ಕೆ ಸೋತಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.